ಕೋವಿಡ್ ಸೋಂಕು ನಿಗ್ರಹ ಲಸಿಕೆ ಪಡೆಯಲು ಭಾರತೀಯರ ಕಾತರ

ನವದೆಹಲಿ ನವೆಂಬರ್ ೧೮. ಕೊರೋನಾ ಮಹಾಮಾರಿ ಸೋಂಕನ್ನು ನಿಯಂತ್ರಿಸುವ ಲಸಿಕೆ ಪಡೆಯಲು ಭಾರತದ ಪ್ರಜೆಗಳು ತೀವ್ರ ಆಸಕ್ತಿ ಹೊಂದಿದ್ದಾರೆ ಎಂಬ ವಿಷಯ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದಿದೆ. ಶೇಕಡಾ ೮೦ ರಷ್ಟು ಭಾರತೀಯರು ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತ ಲಸಿಕೆ ಪಡೆಯಲು ಕಾತರರಾಗಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.
ರಷ್ಯಾದ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (ಆರ್ ಡಿ ಐ ಎಫ್ ) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ೧೧ ದೇಶಗಳ ೧೨೦೦೦ ಜನರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕರೋನವೈರಸ್ ಲಸಿಕೆ ಪಡೆಯುವ ವಿಚಾರ ಹಾಗೂ ಲಸಿಕೆ ಆಯ್ಕೆ ಕುರಿತು ಆದ್ಯತೆಗಳೇನು ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ರಷ್ಯಾದ ಸಾವರಿನ್ ವೆಲ್ತ್ ಫಂಡ್ ನಿಯತಕಾಲಿಕೆಯಲ್ಲಿ ಸಮೀಕ್ಷೆಯ ಫಲಿತಾಂಶಗಳು ಪ್ರಕಟಗೊಂಡಿವೆ.
ರಷ್ಯಾದಲ್ಲಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಕುರಿತು ಶೇಕಡ ೬೦ರಷ್ಟು ಜನರಿಗೆ ತಿಳುವಳಿಕೆ ಇದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಕುರಿತು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ರಾಷ್ಟ್ರಗಳ ಜನರಿಗೆ ಅಧಿಕ ಪ್ರಮಾಣದ ತಿಳುವಳಿಕೆ ಇದೆ. ಮೆಕ್ಸಿಕೋ ಜನರಿಗೆ ಇರುವಷ್ಟೇ ಜಾಗೃತಿ ಇತರ ದೇಶಗಳಲ್ಲೂ ಇದೆ ಎಂದು ಹೇಳಲಾಗಿದೆ.
ಕೋವಿಡ್ ೧೯ ರ ನಿಯಂತ್ರಣಕ್ಕೆ ರಷ್ಯಾ ಅಭಿವೃದ್ಧಿಪಡಿಸುತ್ತಿರುವ ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತ ಹಾಗೂ ಚೈನಾದಲ್ಲಿ ಉತ್ಪಾದನೆ ಮಾಡಬಹುದು ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ.
ಈ ಲಸಿಕೆ ಬಗ್ಗೆ ಭಾರತದಲ್ಲಿನ ಜನರಿಗೆ ಅತ್ಯಂತ ವಿಶ್ವಾಸ ಮೂಡಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಗಳ ವಿಚಾರಕ್ಕಿಂತ ರಷ್ಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಬಗ್ಗೆ ಜನರಲ್ಲಿ ಅತ್ಯಂತ ವಿಶ್ವಾಸ ಮೂಡಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಪ್ರತಿ ಹತ್ತು ಜನರ ಪೈಕಿ ಐದು ಜನರು ರಷ್ಯಾದ ಲಸಿಕೆ ತುಂಬಾ ವಿಶ್ವಾಸಾರ್ಹ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಅಕ್ಟೋಬರ್ ೯ ರಿಂದ ೧೯ರವರೆಗೆ ಈ ಸಮೀಕ್ಷೆ ನಡೆದಿದೆ. ಬ್ರಿಟನ್ನಿನ ಸಂಶೋಧನಾ ಸಂಸ್ಥೆ ಯಾದ ಯು ಗೌ ನಡೆಸಿದ ಸಮೀಕ್ಷೆಯಲ್ಲಿ ಭಾರತ ಸೇರಿದಂತೆ ಬ್ರೆಜಿಲ್, ವಿಯೆಟ್ನಾಮ್, ಈಗಿಫ್ಟ್ ಇಂಡೋನೇಷಿಯಾ ಮಲೇಶಿಯಾ ಮತ್ತಿತರ ರಾಷ್ಟ್ರಗಳ ಪ್ರಜೆಗಳು ಪಾಲ್ಗೊಂಡಿದ್ದರು.