ಕೋವಿಡ್ ಸೋಂಕಿನ ನಂತರ ವಯಸ್ಕರಲ್ಲಿ ಹೃದಯರೋಗ ಸಮಸ್ಯೆ ಹಾಗೂ ಮಕ್ಕಳಲ್ಲಿ ಮಿಸ್ಸಿ ಕಾಯಿಲೆ ಹೆಚ್ಚಳ: ಡಾ. ಎಲ್.ಎಚ್.ಬಿದರಿ

ವಿಜಯಪುರ, ಜೂ.10-ಮಕ್ಕಳಲ್ಲಿ ಕೋವಿಡ್ ಪ್ರಕರಣಗಳ ಹಠಾತ್ ಹೆಚ್ಚಳವಿಲ್ಲದಿದ್ದರೂ, ಎಂ.ಐ.ಎಸ್.-ಸಿ (ಮಿಸ್ಸಿ) ರೋಗ ಲಕ್ಷಣಗಳನ್ನು ಹೊಂದಿರುವ ಮಕ್ಕಳು ಪ್ರತಿದಿನವೂ ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಲ್ಲಿಯವರೆಗೆ ಕೋವಿಡ್ ನ್ಯುಮೋನಿಯಾದಿಂದ ಬಳಲುತ್ತಿರುವ 14 ಮಕ್ಕಳು ದಾಖಲಾಗಿದ್ದು ಅದರಲ್ಲಿ 1 ಸಾವು ಹೊರತುಪಡಿಸಿ ಉಳಿದ ಮಕ್ಕಳು ಗುಣಮುಖರಾಗಿದ್ದಾರೆ ಎಂದು ಎಂದು ಸಂಸ್ಥೆಯ ಮುಖ್ಯಸ್ಥರಾದ ಡಾ. ಎಲ್.ಎಚ್.ಬಿದರಿ ತಿಳಿಸಿದ್ದಾರೆ.
8-18 ವರ್ಷದೊಳಗಿನ ಮಕ್ಕಳಲ್ಲಿ ಈ ಮಿಸ್ಸಿ ರೋಗಲಕ್ಷಣಗಳು ಕಂಡು ಬರುತ್ತಿದ್ದು ಈಗಾಗಲೇ 21 ಮಕ್ಕಳನ್ನು ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಮತ್ತು ಅತ್ಯುತ್ತಮ ಚಿಕಿತ್ಸೆಯಿಂದ ಅವರೆಲ್ಲರೂ ಗುಣಮುಖರಾಗಿರುತ್ತಾರೆ. ಈ ಮಕ್ಕಳಲ್ಲಿ 70% ರಷ್ಟು ಹೃದಯದ ರಕ್ತನಾಳಗಳ ಹಿಗ್ಗುವಿಕೆ ಮತ್ತು ಉಳಿದ 30% ಮಕ್ಕಳು ಶಾಕ್, ಕಡಿಮೆ ರಕ್ತದೊತ್ತಡ ಮತ್ತು ಕಳಪೆ ಹೃದಯ ಸ್ನಾಯುವಿನ ಅಶಕ್ತತೆಯ ಲಕ್ಷಣಗಳನ್ನು ಹೊಂದಿದ್ದರು ಎಂದಿದ್ದಾರೆ.
ಈ ಮಿಸ್ಸಿ ರೋಗದಿಂದ ಬಳಲುತ್ತಿದ್ದ ಮಕ್ಕಳು ಕವಾಸಾಕಿ ಕಾಯಿಲೆಯಂತೆ ಹೃದಯ ರಕ್ತನಾಳಗಳ ಹಿಗ್ಗುವಿಕೆಯ ಹೊರತಾಗಿ ಕಳಪೆ ಹೃದಯದ ಕ್ರಿಯೆ ಮತ್ತು ಶಾಕ್‍ನ್ನು ಸಹ ಹೊಂದಿದ್ದರು. ಇದು ಕವಾಸಾಕಿ ಕಾಯಿಲೆಯಲ್ಲಿ ವಿರಳವಾಗಿ ಕಂಡುಬರುತ್ತದೆ. ಮತ್ತೊಂದು ಆತಂಕವೆಂದರೆ ಲಕ್ಷಣರಹಿತ ಕೋವಿಡ್ ಸೋಂಕಿನ ಮಕ್ಕಳು ಅತಿಸಾರ, ಅಧಿಕ ಜ್ವರ, ಡೆಂಗ್ಯೂ ರೋಗಲಕ್ಷಣಗಳೊಂದಿಗೆ ಬಂದ ನಂತರ ತೀವ್ರ ಮಿಸ್ಸಿ ಲಕ್ಷಣಗಳು ಕಂಡುಬರುತ್ತಿವೆ ಎಂದು ತಿಳಿಸಿದ್ದಾರೆ.
ಅಶ್ವಿನಿ ಆಸ್ಪತ್ರೆಯಲ್ಲಿ 17 ನವಜಾತ ಶಿಶುಗಳು ಮಿಸ್ಸಿ ಲಕ್ಷಣಗಳನ್ನು ಹೊಂದಿದ್ದು, ಅದರಲ್ಲಿ 16 ಸುಧಾರಿಸಿದ್ದು 1 ಮರಣ ಹೊಂದಿದೆ. ಈ ಶಿಶುಗಳಿಗೆ ಆಘಾತದ ಲಕ್ಷಣಗಳು, ಹೃದಯದ ಕಳಪೆ ಕ್ರಿಯೆ ಮತ್ತು ಕೆಲವರಿಗೆ ನ್ಯುಮೋನಿಯಾ ಇತ್ತು. ಈ ಶಿಶುಗಳು ಸ್ಟಿರಾಯ್ಡ್, ಐವಿಐಜಿ, ಹೆಫಾರಿನ್ ಮತ್ತು ವೆಂಟಿಲೇಟರ್ ಕೇರ್‍ಗೆ ಪ್ರತಿಕ್ರಿಯಿಸಿದವು ಎಂದು ವಿವರಿಸಿದ್ದಾರೆ.
ಕೋವಿಡ್ ಸೋಂಕಿನ ನಂತರ ಸುಮಾರು 20 ವಯಸ್ಕರು ತೀವ್ರವಾದ ಹೃದಯ ರಕ್ತನಾಳ ಕಾಯಿಲೆ (ಕರೋನರಿ ಆರ್ಟರಿ ಡಿಸೀಸ್) ಸ್ಟೆಮಿ, ಅಸ್ಥಿರ ಆ್ಯಂಜಿನಾ, ಪಲ್ಮನರಿ ಎಂಬಾಲಿಸಮ್, ಮಯೋಕಾರ್ಡಿಟಿಸ್ ಮತ್ತು ಹೃದಯ ವೈಫಲ್ಯ ಸಮಸ್ಯೆಗಳಿಂದ ದಾಖಲಾಗಿದ್ದರು. ಇವರಲ್ಲಿ 16 ಜನ ಚೇತರಿಸಿಕೊಂಡರು ಮತ್ತು 4 ಜನ ಮರಣ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.
ಹೃದಯದ ರಕ್ತನಾಳಗಳ ಹಿಗ್ಗುವಿಕೆ ಮತ್ತು ಹೃದಯದ ಕಳಪೆ ಕಾರ್ಯವನ್ನು ಪತೆÀ್ತಹಚ್ಚಲು, ಶಾಕ್ ಮತ್ತು ವೆಂಟಿಲೇಟರ್ ಆರೈಕೆಗೆ ಚಿಕಿತ್ಸೆ ನೀಡಲು ಅಗತ್ಯವಾದ ಮತ್ತು ನಿರ್ಣಾಯಕ ಆರೈಕೆ ತಂಡ, ಹೃದಯ ರೋಗ ತಜ್ಞರ ಬ್ಯಾಕಪ್‍ನೊಂದಿಗೆ 24×7 ಎಕೋಕಾರ್ಡಿಯೋಗ್ರಾಫಿ ಸೌಲಭ್ಯದ ಅಗತ್ಯವಿದೆ. ಸಿಆರ್‍ಪಿ, ಫೆರಿಟಿನ್, ಎಲ್ಡಿಹೆಚ್ ಮತ್ತು ಡಿ-ಡೈಮರ್‍ನಂತಹ ಉರಿಯೂತದ ಗುರುತುಗಳನ್ನು ಮೌಲ್ಯಮಾಪನ ಮಾಡಲು ಆಸ್ಪತ್ರೆಗೆ ಪ್ರಯೋಗಾಲಯದ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಮಕ್ಕಳಿಗೆ ಐವಿಐಜಿ (ಪ್ರತಿ ಕೆಜಿಗೆ 2 ಗ್ರಾಂ) ಅಗತ್ಯವಿರುತ್ತದೆ. ಇದು ಮಗುವಿನ ತೂಕವನ್ನು ಅವಲಂಬಿಸಿ 50,000 ದಿಂದ 1,00,000 ವೆಚ್ಚವಾಗುತ್ತದೆ. ಹೆಚ್ಚಿನ ಮಕ್ಕಳು ಬಡ ಸಾಮಾಜಿಕ-ಆರ್ಥಿಕ ಹಿನ್ನೆಲೆ ಮತ್ತು ಅಪೌಷ್ಟಿಕತೆಯಿಂದ ಬಂದಿರುವುದರಿಂದ ಅವರಿಗೆ ಮೇಲಿನ ಸೌಲಭ್ಯಗಳೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗಿದೆ ಅಥವಾ ಐವಿಐಜಿ ಮತ್ತು ಕ್ರಿಟಿಕಲ್ ಕೇರ್‍ಗಾಗಿ ಸುವರ್ಣ ಆರೋಗ್ಯ ಸೇವಾ ಟ್ರಸ್ಟ್ ಅಡಿಯಲ್ಲಿ ಪ್ರತ್ಯೇಕ ಪ್ಯಾಕೇಜ್ ಅಳವಡಿಸಿ ಎ.ಬಿ.ಎ.ಆರ್.ಕೆ. (ಬಿಪಿಎಲ್ ಕಾರ್ಡ ಹೊಂದಿರುವ) ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯ ವ್ಯವಸ್ಥೆ ಆಗಬೇಕಾಗಿದೆ ಎಂದಿದ್ದಾರೆ.
ನವಜಾತ ಶಿಶುಗಳು, ಮಕ್ಕಳು ಮತ್ತು ವಯಸ್ಕರಿಗೆ ಕೋವಿಡ್ ಮತ್ತು ಪೋಸ್ಟ್-ಕೋವಿಡ್ ಚಿಕಿತ್ಸೆಗಳನ್ನು ಡಾ. ಶ್ರೀಶೈಲ್ ಗಿಡಗಂಟಿ (ನವಜಾತ ಶಿಶು ತೀವ್ರ ನಿಗಾ ತಜ್ಞ), ಡಾ|| ವಿರೇಶ ಸ್ವಾಮಿ (ಮಕ್ಕಳ ತೀವ್ರ ನಿಗಾ ತಜ್ಞ), ಡಾ. ಗೌತಮ ವಗ್ಗರ (ಹೃದ್ರೋಗ ತಜ್ಞ), ಡಾ. ಸುಧೀಂದ್ರ ಕುಲಕರ್ಣಿ (ನುರಿತ ಚಿಕ್ಕಮಕ್ಕಳ ತಜ್ಞ), ಡಾ|| ಸುಷ್ಮಿತಾ ಮನಗೂಳಿ (ಫಿಜಿಶಿಯನ್) ಇವರುಗಳು ವಿಜಯಪುರ ನಗರದ ಹಿರಿಯ ಹಾಗೂ ಖ್ಯಾತ ಚಿಕ್ಕಮಕ್ಕಳ ತಜ್ಞ ವೈದ್ಯರಾದ ಡಾ. ಎಲ್.ಎಚ್.ಬಿದರಿ ಅವರ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಸುಸಜ್ಜಿತ 200 ಹಾಸಿಗೆಗಳುಳ್ಳ ಡಾ|| ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ 6 ಪ್ರತ್ಯೇಕ ಚಿಕ್ಕಮಕ್ಕಳ ವಾರ್ಡ ಹಾಗೂ 6 ಪ್ರತ್ಯೇಕ ವಯಸ್ಕರ ವಾರ್ಡಗಳಿದ್ದು ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸಾರ್ವಜನಿಕರು ಯಾವುದೇ ಆತಂಕಪಡಬೇಕಾದ ಅವಶ್ಯಕತೆ ಇರುವುದಿಲ್ಲ. ನಿರೀಕ್ಷಿತ ಕೋವಿಡ್ 3ನೇ ಅಲೆಯ ಪೂರ್ವಸಿದ್ಧತೆಗಾಗಿ 50 ಹಾಸಿಗೆಗಳನ್ನು ಸರ್ಕಾರಿ ರೋಗಿಗಳಿಗೆ ಮೀಸಲಾಗಿಡಲಾಗಿದೆ ಎಂದು ಬಿದರಿಯವರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.