ಕೋವಿಡ್ ಸೋಂಕಿನಿಂದ ಮೃತರ ಅಂತ್ಯಸಂಸ್ಕಾರಕ್ಕೆ ಕುಟುಂಬದವರಿಗೆ ಅನುವು

ಬೆಂಗಳೂರು, ಏ.21- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಂಖ್ಯೆ ಹೆಚ್ಚಾಗುತ್ತದೆ ಆದರಿಂದ ಮೃತ ಪಡುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಹೀಗಾಗಿ ಮೃತರ ಅಂತ್ಯಕ್ರಿಯೆ ನಡೆಸಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಅವರ ಜಾಗದಲ್ಲಿ ಇಲ್ಲವೇ ಅವರ ಫಾರ್ಮ್ ಹೌಸ್ ನಲ್ಲಿ ನಡೆಸಲು ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿದೆ.

ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಅವರ ಕುಟುಂಬದ ಸದಸ್ಯರು ನಡೆಸಲು ಅನುವು ಮಾಡಿಕೊಡಲಾಗಿದೆ. ಮೂಲಕ ಕೊನೆಯ ಬಾರಿ ಅಂತ್ಯಸಂಸ್ಕಾರದ ವಿಧಿವಿಧಾನಗಳು ನಡೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರ ನಡೆಸಲು ಸೂಕ್ತ ಜಾಗ ಸಿಗದೆ ಪರದಾಡುತ್ತಿರುವ ಬಗ್ಗೆ ಬಂದ ಅನೇಕ ದೂರುಗಳ ಹಿನ್ನೆಲೆಯಲ್ಲಿ ಇಂಥದೊಂದು ನಿರ್ಧಾರಕ್ಕೆ ಸರಕಾರ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳ ಸದಸ್ಯರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಅಂತಿಮ ವಿಧಿವಿಧಾನ ನಡೆಸಲು ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ.

ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಎಲ್ಲರೂ ಕಡ್ಡಾಯವಾಗಿ ಪಿಪಿಸಿ ಕಿಟ್ ಧರಿಸುವ ಜೊತೆಗೆ ಸ್ಯಾನಿಟೈಸರ್ ಮಾಡಿಕೊಳ್ಳುವುದು ಸೇರಿದಂತೆ ಇನ್ನಿತರ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಟ್ಟಲು ಅವಕಾಶ ಇಲ್ಲ:

ಕುಟುಂಬದ ಸದಸ್ಯರು ಮೃತದೇಹವನ್ನು ಮುಟ್ಟಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಜೊತೆಗೆ ಅದನ್ನು ತಬ್ಬಿಕೊಳ್ಳುವುದು ಆಗಲಿ ಅಥವಾ ಇನ್ನಿತರೆ ಯಾವುದೇ ದೇಹವನ್ನು ಸ್ಪರ್ಶಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 116 ಮಂದಿ ಸಾವನ್ನಪ್ಪಿದ್ದು ಇದುವರೆಗೆ ಮೃತಪಟ್ಟವರ ಸಂಖ್ಯೆ 13,762ಕ್ಕೆ ಏರಿಕೆಯಾಗಿದೆ.

ಅಶೋಕ್ ಸುಳಿವು:

ಇದಕ್ಕೂ ಮುನ್ನ ಕಂದಾಯ ಸಚಿವ ಆರ್ ಅಶೋಕ್ ಅವರು ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯಸಂಸ್ಕಾರವನ್ನು ಅವರ ಕುಟುಂಬದ ಸದಸ್ಯರು ಅವರ ಜಾಗದಲ್ಲಿ ನಡೆಸಲು ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸುಳಿವು ನೀಡಿದ್ದರು.

ಕುಟುಂಬದ ಸದಸ್ಯರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಇಲ್ಲದಿದ್ದರೆ ಮುಂದೆ ಆವಕಾಶ ಮಾಡಿಕೊಳ್ಳುವುದನ್ನು ಸರ್ಕಾರ ನಿಲ್ಲಿಸಲಿದೆ ಎನ್ನುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ