ಕೋವಿಡ್ ಸೋಂಕಿನಲ್ಲಿ ಬೆಂಗಳೂರು ಪ್ರಥಮ


-ಮಹಮ್ಮದ್
ಬೆಂಗಳೂರು, ನ.೧೫-ಕೊರೋನಾ ಹೊರಟು ಬಿಟ್ಟಿದೆ ಎಂದು ಎಲ್ಲೆಡೆ ಜನರು ನಿಟ್ಟುರು ಬಿಟ್ಟಿದ್ದಾರೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತದ್ವಿರುದ್ಧ ಕಥೆಯಿದ್ದು, ರಾಷ್ಟ್ರದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸಕ್ರಿಯ ಪೀಡಿತರು ಬೆಂಗಳೂರಿನಲ್ಲಿದ್ದಾರೆ. ಯಾವುದೇ ಸಮಯದಲ್ಲಿ ಮತ್ತೆ ಸ್ಪೋಟಗೊಳ್ಳಬಹುದಾಗಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಮುಖ ನಾಲ್ಕು ನಗರಗಳ ಪೈಕಿ ಬೆಂಗಳೂರಿನಲ್ಲಿಯೇ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆಗಳಲ್ಲಿ ಮುಂದಿದೆ. ಅಷ್ಟೇ ಅಲ್ಲದೆ, ರಾಷ್ಟ್ರ ರಾಜಧಾನಿ ನವದೆಹಲಿಗಿಂತ ಐದು ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಇನ್ನೂ ಜೀವಂತ ಇರುವುದು ಆತಂಕ ದ್ವಿಗುಣಗೊಳಿಸಿದೆ.
ಬಿಬಿಎಂಪಿ ಬಹಿರಂಗಪಡಿಸಿರುವ ಅಧಿಕೃತ ಮಾಹಿತಿ ಪ್ರಕಾರ, ನವದೆಹಲಿಯಲ್ಲಿ ೨೦೫ ಕೋವಿಡ್ ಸಕ್ರಿಯ ಪ್ರಕರಣಗಳಿದ್ದರೆ, ಮುಂಬೈನಲ್ಲಿ ೨೮೮, ಚೆನ್ನೈನಲ್ಲಿ ಬರೀ ೧೬೬ ಪ್ರಕರಣಗಳು ಇವೆ. ಆದರೆ, ಬೆಂಗಳೂರಿನಲ್ಲಿ ಬರೋಬ್ಬರಿ ೧,೫೮೫ ಸೋಂಕಿನ ಪ್ರಕರಣಗಳು ಚಾಲ್ತಿಯಲ್ಲಿವೆ.
ಆದರೆ, ಈ ನಾಲ್ಕು ನಗರಗಳ ಪೈಕಿ ಲಸಿಕೆ ನೀಡುವಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗಿಲ್ಲ ಎನ್ನುವುದಕ್ಕೆ ಉತ್ತರವೇ ಇಲ್ಲದಂತೆ ಆಗಿದೆ.
ಮತ್ತೊಂದೆಡೆ, ಎಂದಿನಂತೆ ಕೋವಿಡ್ ಪ್ರಕರಣಗಳು ಗಮನಿಸಿದಾಗ ಕಳೆದ ೧೩ ದಿನಗಳ ಪೈಕಿ ಪ್ರತಿನಿತ್ಯದ ಕೋವಿಡ್ ಪ್ರಕರಣಗಳ ಸಂಖ್ಯೆ ೧೦೦ರ ಗಡಿಯೊಳಗೆ ಇತ್ತು.ಆದರೆ, ನವೆಂಬರ್ ೮ರಂದು ಮಾತ್ರ ಏಕಾಏಕಿ ೨೨೫ಕ್ಕೆ ತಲುಪಿತ್ತು. ಇದಕ್ಕೆ ಇಲ್ಲಿನ ವಾತಾವರಣವೇ ಕಾರಣ ಎಂದು ಆರೋಗ್ಯ ಅಧಿಕಾರಿವೊಬ್ಬರು ಮಾಹಿತಿ ನೀಡಿದರು.
೧೦ ವಾರ್ಡಿನಲ್ಲಿ ಕೋವಿಡ್ ಇಲ್ಲ: ಕಳೆದ ಏಳು ದಿನಗಳಿಂದ ಇಲ್ಲಿನ ಕೋಣನಕುಂಟೆ, ಜರಗನಹಳ್ಳಿ, ಪದ್ಮನಾಭನಗರ, ಬನಶಂಕರಿ ದೇವಾಲಯ, ಜಕ್ಕಸಂದ್ರ, ಬೈರಸಂದ್ರ, ಯಡಿಯೂರು, ಕರಿಸಂದ್ರ, ವಿದ್ಯಾಪೀಠ, ಕತ್ರಿಗುಪ್ಪೆ ವಾರ್ಡ್‌ಗಳಲ್ಲಿ ಒಂದು ಪ್ರಕರಣವೂ ವರದಿಯಾಗಿಲ್ಲ ಎಂದು ಬಿಬಿಎಂಪಿ ಆರೋಗ್ಯ ವಿಭಾಗ ಇಳಿಸಿದೆ.
ಆದರೆ, ಬೆಳ್ಳಂದೂರಿನಲ್ಲಿ ೪, ದೊಡ್ಡನೆಕ್ಕುಂದಿ, ಎಚ್‌ಎಸ್‌ಆರ್ ಲೇಔಟ್ ನಲ್ಲಿ ತಲಾ ೨, ಜಯನಗರ ಪೂರ್ವ, ಬೊಮ್ಮನಹಳ್ಳಿ, ಹೂಡಿ, ಕೊಟ್ಟಿಗೆಪಾಳ್ಯ, ವಿಜಿನನಗರ,ಅರಮನೆ ನಗರ, ಹಗಡೂರಿನಲ್ಲಿ ತಲಾ ಒಂದೊಂದು ಕೋವಿಡ್ ಪ್ರಕರಣ ಬೆಳಕಿಗೆ ಬಂದಿದೆ.
ಮಳೆಯೇ ಕಾರಣ: ಕಳೆದ ಹನ್ನೇರಡು ದಿನಗಳಿಂದ ಬೆಂಗಳೂರಿನ ವಾತಾವರಣ ಅಧಿಕವಾಗಿಯೇ ಶೀತದಲ್ಲಿದೆ.ಹೀಗಾಗಿ, ಜ್ವರ ಸೇರಿದಂತೆ ಕೋವಿಡ್ ಲಕ್ಷಣಗಳು ಕಂಡುಬರುವುದು ಸಹಜ. ಆದರೆ, ಇದರಿಮದ ಆತಂಕಗೊಳ್ಳುವುದು ಏಕೆಂದರೆ, ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳಬಹುದು ಎಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟರು.
ಜಾಗೃತಿ ಅಗತ್ಯ
ಜನರು ಕೋವಿಡ್ ಕುರಿತು ಈಗಲೂ ಜಾಗೃತಿವಹಿಸಬೇಕು. ಮಾಸ್ಕ್ ಧರಿಸುವ ಜೊತೆಗೆ, ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು.ಇಲ್ಲದಿದ್ದರೆ, ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ.
-ಡಾ.ವೇಣುಗೋಪಾಲ್, ಸರಕಾರಿ ಆಸ್ಪತ್ರೆ ವೈದ್ಯ
ಬೆಂಗಳೂರಿನಲ್ಲಿ ಎಷ್ಟು ಪ್ರಕರಣ?

  • ಕಳೆದ ೨೪ ಗಂಟೆಗಳಲ್ಲಿ ೩೬ ಕೋವಿಡ್ ಪ್ರಕರಣ
  • ಒಟ್ಟು ಸಕ್ರಿಯ ಪ್ರಕರಣ: ೧,೫೮೫
  • ಒಟ್ಟಾರೆ ಪ್ರಕರಣ: ೧೮,೭೫,೬೧೬
  • ಒಟ್ಟು ಸಾವಿನ ಪ್ರಕರಣ: ೧೬,೯೯೦