ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆ

ನವದೆಹಲಿ, ಏ.೬- ದೇಶದಲ್ಲಿ ಮೊದಲ ಬಾರಿಗೆ ೧ ಲಕ್ಷಕ್ಕೂ ಅಧಿಕ ದಾಖಲೆಯ ಪ್ರಮಾಣದಲ್ಲಿ ಕೊರೊನಾ ಸೋಂಕು ನಿನ್ನೆ ಸ್ಪೋಟಗೊಂಡಿತ್ತು, ಇಂದು ನಿನ್ನೆಗಿಂತ ತುಸು ಕಡಿಮೆ ಸೋಂಕು ದೇಶದಲ್ಲಿ ದೃಢಪಟ್ಟಿದೆ.ಇದು ತುಸು ನಿರಾಳ ಭಾವ ತರಿಸಿದೆ.
ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೯೬,೯೮೨ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ,೪೪೬ ಮಂದಿ ಸಾವನ್ನಪ್ಪಿದ್ದಾರೆ ಅಲ್ಲದೆ ೫೦,೧೪೩ ಮಂದಿ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಇಂದು ಬೆಳಗ್ಗೆ ದಾಖಲಾಗಿರುವ ಹೊಸ ಸೋಂಕು ಪ್ರಕರಣ ಸೇರಿದಂತೆ ಇಲ್ಲಿಯವರೆಗೆ ಒಟ್ಟಾರೆ ೧,೨೬,೮೬,೦೪೯ ಮಂದಿಗೆ ಸೋಂಕು ಕಾಣಿಸಿಕೊಂಡಿದೆ, ಇಲ್ಲಿಯ ತನಕ ೧,೧೭,೩೨,೨೭೯ ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ, ಒಟ್ಟಾರೆ ೧,೬೫,೫೪೭ ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಪಂಜಾಬ್, ಚಂಡಿಘಡ, ದೆಹಲಿ, ಛತ್ತೀಸ್‌ಗಢ, ಸೇರಿದಂತೆ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪ್ರಮಾಣ ನಿತ್ಯ ಏರಿಕೆಯಾಗಿದೆ.
ಮಹಾರಾಷ್ಟದಲ್ಲಿ ಇಂದು ೪೭,೨೮೮ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದು ಸೋಂಕು ನಿಯಂತ್ರಣ ತಲೆ ನೋವು ತರಿಸಿದೆ.
೮ ಲಕ್ಷ ಸನಿಹ:
ದೇಶದಲ್ಲಿ ಗಣನೀಯವಾಗಿ ಕುಸಿದಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ೮ ಲಕ್ಷ ಸಕ್ರಿಯ ಪ್ರಕರಣಗಳ ಹಾಜು ಬಾಜಿನಲ್ಲಿದೆ.
ದಿನದಿಂದ ದಿನಕ್ಕೆ ಸೋಂಕು ಪ್ರಕರಣ ನಿತ್ಯ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ೭,೮೮,೨೨೩ ಮಂದಿ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಮಾಹಾರಾಷ್ಟ್ರ ಒಂದರಲ್ಲಿ ನಿತ್ಯ ದಾಖಲಾಗುತ್ತಿರುವ ಒಟ್ಟಾರೆ ಸೋಂಕಿನ ಪೈಕಿ ಅರ್ಧದಷ್ಟು ಸೋಂಕು ಮತ್ತು ಸಕ್ರಿಯ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ದೇಶದಲ್ಲಿ ಸಕ್ರಿಯ ಪ್ರಕರಣ ಏರಿಕೆಗೆ ಕಾರಣವಾಗಿದೆ.
ಕಳೆದ ಒಂದೂವರೆ ತಿಂಗಳಲ್ಲಿ ಸಕ್ರಿಯ ಪ್ರಕರಣ ಸಂಖ್ಯೆ ೬.೫೦ ಲಕ್ಷ ಹೆಚ್ಚಾಗಿದೆ.

೨೫ ಕೋಟಿಗೂ ಅಧಿಕ ಪರೀಕ್ಷೆ
ದೇಶದಲ್ಲಿ ಇದುವರೆಗೂ ೨೫ ಕೋಟಿಗೂ ಅಧಿಕ ಮಂದಿಗೆ ಕೊರೊನಾ ಸೋಂಕು ಒತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
ಕಳೆದ ೨೪ ಗಂಟೆಗಳಲ್ಲಿ ೧೨,೧೧,೬೧೨ ಮಂದಿಗೆ ಪರೀಕ್ಷೆ ಮಾಡಿರುವುದೂ ಸೇರಿದಂತೆ ಇಲ್ಲಿಯವರೆಗೆ ದೇಶದಲ್ಲಿ ೨೫,೦೨,೩೧,೨೬೯ ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ತಿಳಿಸಿದೆ.