ಕೋವಿಡ್ ಸೋಂಕಿತರಿಗೆ ಚಿಕಿತ್ಸೆ: ಜಿಲ್ಲೆಯಲ್ಲಿನ ಮಾನವ ಸಂಪನ್ಮೂಲ ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚನೆ

ಕಲಬುರಗಿ.ಏ.30:ಕೋವಿಡ್ ಎರಡನೇ ಅಲೆದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಕೋವಿಡ್ ಸೋಂಕಿತರು ದಾಖಲಾಗುತ್ತಿದ್ದು, ರೋಗಿಗಳ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿರುವ ಎಲ್ಲಾ ಮೆಡಿಕಲ್, ನರ್ಸಿಂಗ್, ಆಯುರ್ವೇದ, ಹೊಮಿಯೋಪತಿ ಕಾಲೇಜುಗಳಲ್ಲಿರುವ ಮಾನವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
ಮೆಡಿಕಲ್, ನರ್ಸಿಂಗ್, ಆಯುರ್ವೇದ, ಹೋಮಿಯೋಪತಿ ಕಾಲೇಜುಗಳಲ್ಲಿರುವ ವೈದ್ಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಇವರೆಲ್ಲರ ಪಟ್ಟಿಯನ್ನು ಸಾಯಂಕಾಲದೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಔಷಧಿ, ಆಕ್ಸಿಜನ್ ಹಾಗೂ ಬೆಡ್‍ಗೆ ಕೊರತೆಯಿಲ್ಲ. ಆದರೆ ಸಮರ್ಪಕವಾಗಿ ಮಾನವ ಸಂಪನ್ಮೂಲ ಬಳಕೆಯಾಗುತ್ತಿಲ್ಲ. ರೆಡ್ ಕ್ರಾಸ್, ಭಾರತೀಯ ವೈದ್ಯಕೀಯ ಸಂಘದ ವೈದ್ಯರು ಸೇರಿದಂತೆ ಒಟ್ಟಾರೆ 2 ರಿಂದ 3 ಸಾವಿರ ವೈದ್ಯ ಸಿಬ್ಬಂದಿಯನ್ನು ಕೋವಿಡ್ ಸೇವೆಗೆ ಸಿದ್ದಪಡಿಸಿ ಎಂದು ಸಂಸದ ಡಾ.ಉಮೇಶ ಜಾಧವ ಅವರು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ತಿಳಿಸಿದರು.
ಈಗಾಗಲೇ ಜಿಲ್ಲೆಯ ಎಲ್ಲಾ ಆಸ್ಪತ್ರೆ ಹಾಗೂ ತಾಲೂಕಾ ಪ್ರಾಥಮಿಕ ಕೇಂದ್ರಗಳಿಗೆ ರೆಮೆಡಿಸ್ವಿರ್ ಇಂಜೆಕ್ಷನ್ ಪೂರೈಕೆಯಾಗಿದ್ದು, ಇಂಜೆಕ್ಷನ್ ಕೊರತೆ ಇಲ್ಲ. ಆಕ್ಸಿಜನ್ ಸಹ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. ಅವಶ್ಯಕತೆ ಬದ್ದಲ್ಲಿ ಬೇರೆ ರಾಜ್ಯಗಳಿಂದ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗುವುದು. ಸರ್ಕಾರಿ ಆಸ್ಪತ್ರೆಗಳಿಗೆ ಯಾವುದೇ ವೈದ್ಯಕೀಯ ಉಪಕರಣಗಳ ಕೊರತೆ ಉಂಟಾದರೆ ಸರ್ಕಾರ ಅದನ್ನು ಪೂರೈಸಲಿದೆ. ಕಲಬುರಗಿಯಲ್ಲಿ ಕೋವಿಡ್ ರೋಗಿಗಳಗೆ ಆದಷ್ಟು ಬೇಗ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಲು ಬೇಕಾಗುವ ಅಗತ್ಯ ಸಿದ್ಧತೆ ಮಾಡಿಕೊಳ್ಳಿ, ಸರ್ಕಾರದಿಂದ ಅನುಮತಿ ಹಾಗೂ ಉಪಕರಣಗಳನ್ನು ಕೊಡಿಸಲಾಗುವುದು ಎಂದು ಅವರು ಜಿಮ್ಸ್ ಸಂಸ್ಥೆಯ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಅವರಿಗೆ ತಿಳಿಸಿದರು.
ಜಿಲ್ಲಾಡಳಿತ ಸಂಪೂರ್ಣವಾಗಿ ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಸಿದ್ಧವಾಗಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಂಸದರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ನಿವೃತ್ತಿ ಹೊಂದಿರುವ ವೈದ್ಯರು, ನಗರದ ಸಣ್ಣ-ಸಣ್ಣ ಕ್ಲಿನಿಕ್ ಹೊಂದಿರುವ ವೈದ್ಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳನ್ನು ಕೋವಿಡ್ ಸೇವೆಗೆ ಬಳಸಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹೆಚ್. ಮಲಾಜಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್, ವಿಧಾನ ಪರಿಷತ್ತಿನ ಶಾಸಕ ಶಶಿಲ್ ಜಿ. ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ್, ಡಿಸಿಪಿ ಕಿಶೋರ್ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀμï ಶಶಿ, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಮೆಡಿಕಲ್, ಆಯುರ್ವೇದ, ನರ್ಸಿಂಗ್, ಹೋಮಿಯೋಪತಿ ಕಾಲೇಜಿನ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.