ಕೋವಿಡ್ ಸುಲಿಗೆ ಆಸ್ಪತ್ರೆಗಳ ವಿರುದ್ಧ ಕ್ರಮ : ಅಶೋಕ್

ಬೆಂಗಳೂರು, ಏ.೨೮: ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯದೆಲ್ಲೆಡೆ ಕಾನೂನು ಮೀರಿ ಕೋವಿಡ್ ರೋಗಿಗಳಿಂದ ಸುಲಿಗೆ ಮಾಡುವಂತಹ ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥನಗರದಲ್ಲಿರುವ ಕಾರ್ಮಿಕ ಸಮುದಾಯದಲ್ಲಿ ಬಿಬಿಎಂಪಿ ನಿರ್ಮಿಸಿರುವ ೧೩೦ ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಸಚಿವ ಅಶೋಕ್ ಮಾತನಾಡಿದರು.
ಕೋವಿಡ್ ಪಾಸಿಟಿವ್ ಬಂದವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ.ನಗರದಲ್ಲಿ ಸುಮಾರು೨ ರಿಂದ ೩ ಸಾವಿರ ಜನ ಈ ರೀರಿ ಮಾಡಿದ್ದಾರೆ.ಹಲವರು ಮನೆಗಳನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ.ಅಂತಹವರಿಂದಲೇ ಕೊರೊನ ಸೋಂಕು ಹೆಚ್ಚಲು ಕಾರಣ ಎಂದು ಆತಂಕ ವ್ಯಕ್ತಪಡಿಸಿದ ಅಶೋಕ್,ಅಂತಹವರ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದರು.
ರೋಗ ಉಲ್ಬಣಿಸಿದಾಗ ಐಸಿಯು ಬೆಡ್ ಬೇಕು ಎಂದು ಬರುತ್ತಾರೆ.ಅದರಿಂದಾಗಿಯೇ ಸಮಸ್ಯೆ ಉಲ್ಬಣಿಸಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಈಗ ೧೨ ಕೋವಿಡ್ ಸೆಂಟರ್ ಗಳನ್ನು ತೆರೆಯಲಾಗಿದೆ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಆರಂಭಗೊಂಡಿರುವ ಕೋವಿಡ್ ಸೆಂಟರ್ ೧೩ ನೆಯದಾಗಿದೆ.ಇಲ್ಲಿ ೧೩೦ ಹಾಸಿಗೆಗಳ ವ್ಯವಸ್ಥೆ ಇದ್ದು,ಇಲ್ಲಿಗೆ ಬರುವ ರೋಗಿಗಳಿಗೆ ಅತ್ಯುತ್ತಮ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.ಶೌಚಾಲಯ, ಸ್ನಾನದ ಗೃಹಗಳು,ಊಟದ ವ್ಯವಸ್ಥೆ ಎಲ್ಲಾ ಇರುತ್ತದೆ ಎಂದು ಹೇಳಿದರು.
ಸ್ಥಳೀಯ ಶಾಸಕ ಮಂಜುನಾಥ್ ಅವರು ೧೦ ಐಸಿಯು ಬೆಡ್ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.ಅದನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದ ಸಚಿವ ಅಶೋಕ್,ನಾಗರಿಕರು ಸೌಲಭ್ಯ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ನಗರದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಕೊರೊನ ರೋಗಿಗಳಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್,ಬಿಬಿಎಂಪಿ ಕಡೆಯಿಂದ ಹೋದ ಯಾವುದೇ ರೋಗಿಗಳಿಗೆ ಯಾವುದೇ ತೊಂದರೆ ಆಗಿಲ್ಲ.ಖಾಸಗಿಯಾಗಿ ಹೋದವರಿಗೆ ತೊಂದರೆ ಆಗಿರುವುದು ಗಮನಕ್ಕೆ ಬಂದಿದೆ.ಸರ್ಕಾರಿ ಕಾನೂನು ಗಾಳಿಗೆ ತೂರುವ ಆಸ್ಪತ್ರೆಗಳ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ,ಶಾಸಕ ಆರ್ ಮಂಜುನಾಥ್, ಬಿಬಿಎಂಪಿ ದಾಸರಹಳ್ಳಿ ವಲಯದ ವಿಶೇಷ ಆಯುಕ್ತ ರವೀಂದ್ರ,ಜಂಟಿ ಆಯುಕ್ತ ನರಸಿಂಹಮೂರ್ತಿ ಮೊದಲಾದವರು ಹಾಜರಿದ್ದರು.