ಕೋವಿಡ್ ಸಾವಿನ ಪ್ರಮಾಣ ತಡೆಗೆ ಸಹಾಯವಾಣಿ

ಕೋಲಾರ,ಏ.೨೮,- ಕೊರೋನಾ ಸೋಂಕಿತರಿಗೆ ಅಗತ್ಯವಾದ ಆಕ್ಸಿಜನ್ ಸರಬರಾಜು ಹಾಗೂ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್, ಈ ಸಂಬಂಧ ರೋಗಿಗಳು ನ್ಯಾಯಾಲಯ ಒದಗಿಸಿರುವ ಸಹಾಯವಾಣಿ ಸೌಲಭ್ಯ ಪಡೆಯಲು ಸೂಚನೆ ನೀಡಿದರು.
ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕೋವಿಡ್ ೨ನೇ ಅಲೆಯಿಂದ ಸೋಂಕಿತರ ಸಾವಿನ ಪ್ರಮಾಣ ಹೆಚ್ಚುತ್ತಿದೆ ಈ ಹಿನ್ನಲೆಯಲ್ಲಿ ನ್ಯಾಯಾಂಗ ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾಗಿದೆ, ಆಸ್ಪತ್ರೆಯಲ್ಲಿ ದಿನದ ೨೪ ಗಂಟೆಯೂ ಆಕ್ಸಿಜನ್ ಪೂರೈಕೆಯಾಗುವಂತೆ ಕ್ರಮವಹಿಸಲು ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಕಾರ್ಖಾನೆಗಳಿಗೆ ನೀಡುತ್ತಿರುವ ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿ ಕೋವಿಡ್ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಲ್ಲಿ ಸರಬರಾಜು ಮಾಡಲು ಕ್ರಮ ಕೈಗೊಂಡಿರುವುದಾಗಿ ನ್ಯಾಯಾಧೀಶರ ಗಮನಕ್ಕೆ ತಂದರು.
ನ್ಯಾಯಾಧೀಶರಾಧ ರಘುನಾಥ್ ಮಾತನಾಡಿ, ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ, ಮರಣದ ಪ್ರಮಾಣ ಕಡಿಮೆ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳಿ ಎಂದರು.
ನ್ಯಾಯಾಧೀಶರು ಎಸ್ಪಿ ಕಾರ್ತಿಕ್‌ರೆಡ್ಡಿ ಅವರಿಗೆ ಸೂಚನೆ ನೀಡಿ, ಯಾವ ಪ್ರದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ತಿಳಿದುಕೊಂಡು ಅಂತಹ ಸ್ಪಾಟ್‌ಗಳನ್ನು ಗುರ್ತಿಸಿ ಅಲ್ಲಿ ಕಫ್ರ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಸೂಚಿಸಿದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಕೋವಿಡ್ ೧೯ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೂಳುವುದು ಸೊಂಕಿತರಿಗೆ ಸಮರ್ಪಕವಾಗಿ ಚಿಕಿತ್ಸೆ ಮತ್ತು ಸೌಲಭ್ಯ ದೊರಕಿಸಿಕೊಡಲು ಅಗತ್ಯ ಕ್ರಮ ವಹಿಸಲು ಎಲ್ಲಾ ಗ್ರಾಮ ಪಂಚಾಯ್ತಿ ಪಿ.ಡಿ.ಓಗಳಿಗೆ ಸೂಚಿಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಅವರಿಗೆ ನ್ಯಾಯಾಧೀಶರು ಸೂಚಿಸಿದರು.
ಕೋವಿಡ್ ಆಸ್ಪತ್ರೆಗಳಲ್ಲಿ ಸೊಂಕಿತರಿಗೆ ಸೂಕ್ತ ಆಕ್ಸಿಜನ್ ಮತ್ತು ಚಿಕಿತ್ಸೆ ಯಾವುದೇ ಕಾರಣಕ್ಕೆ ಲೋಪವಾದಂತೆ ಆಸ್ಪತ್ರೆಗಳಲ್ಲಿ ಕ್ರಮವಹಿಸಬೇಕು ಮತ್ತು ಪ್ರತಿಯೊಬ್ಬ ಅರ್ಹ ವ್ಯಕ್ತಿಗೆ ಲಸಿಕೆ ಲಭ್ಯವಾಗುವಂತೆ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿದೇರ್ಶನ ನೀಡಿದರು.
ಕೋವಿಡ್ ೧೯ ಸೊಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರು ಜಿಲ್ಲಾಢಳಿದೊಂದಿಗೆ ಕೈಜೋಡಿಸಬೇಕು, ಎರಡನೇ ಆಲೆ ಕೋವಿಡ್ ೧೯ ಸೊಂಕು ದೇಶದ್ಯಾಂತ ಪುನಃ ಹೆಚ್ಚಾಗುತ್ತಿದ್ದು ಜಿಲ್ಲೆಯೂ ಅದಕ್ಕೆ ಹೊರತಾಗಿಲ್ಲಾ ಇದನ್ನು ತಡೆಗಟ್ಟಲು ಸಾರ್ವಜನಿಕರು ಮುಂಜಾಗ್ರತ ಕ್ರಮಗಳನ್ನು ವಹಿಸಬೇಕು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸ್ಯಾನಿಟೈಸರ್ ಬಳಕೆ ಪ್ರತಿಯೊಬ್ಬರ ಕರ್ತವ್ಯವಾಗಲಿ, ಲಸಿಕೆ ಪ್ರತಿಯೊಬ್ಬರೂ ಹಾಕಿಸಿಕೊಳ್ಳಿ ಎಂದರು.
ಆಕ್ಸಿಜನ್,ಬೆಡ್‌ಗಾಗಿ
ಕೋರ್ಟ್ ಸಹಾಯವಾಣಿ
ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಕೋವಿಡ್ ಸೊಂಕಿತರಿಗೆ ಸಂಬಂಧಿಸಿದಂತೆ ಚಿಕಿತ್ಸೆ ,ಬೆಡ್ ವ್ಯವಸ್ಥೆ, ಆಕ್ಸಿಜನ್ ವ್ಯವಸ್ಥೆಯಲ್ಲಿ ಏನಾದರು ಸಹಕಾರ ಬೇಕಿದ್ದಲ್ಲಿ ಸಾರ್ವಜನಿಕರಿಗೆ ಅನುಕೂಲವಗುವಂತೆ ಸಹಾಯ ವಾಣಿಯನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಸಿ.ಹೆಚ್. ಗಂಗಾಧರ್ ನಿರ್ವಹಣೆ ಮಾಡಲು ಸೂಚಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಈ ಸಂಬಂಧ ನ್ಯಾಯಧೀಶರಾದ ಸಿ.ಹೆಚ್.ಗಂಗಾಧರ್ ಅವರ ಸಹಾಯವಾಣಿ ಸಂಖ್ಯೆ-೮೭೬೨೦೦೨೩೯೩, ವಕೀಲ ಕೆ.ಆರ್.ಧನರಾಜ್ ಅವರ ದೂರವಾಣಿ ಸಂಖ್ಯೆ-೭೪೧೧೭೫೪೪೦೪, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ದೂರವಾಣಿ ಸಂಖ್ಯೆ -೧೮೦೦-೪೨೫-೯೦೯೦೦ ಈ ಸಂಖ್ಯೆಗಳಿಗೆ ಕರೆ ಮಾಡಿದರೆ ಸೊಂಕಿತರಿಗೆ ಅವಶ್ಯಕವಿರುವ ಚಿಕಿತ್ಸೆ ಅಥವ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಯೊದಿಗೆ ಸಂಪರ್ಕಸಿ ಸೊಂಕಿತರ ಅವಶ್ಯಕಗಳನ್ನು ಪೊರೈಸಲಾಗುವುದು
ಸಾರ್ವಜನಿಕರ ಈ ಸಹಾಯವಾಣಿ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ನ್ಯಾಯಾಧಿಶರು ತಿಳಿಸಿದರು. ಸಭೆಯಲ್ಲಿ ನ್ಯಾಯಧೀಶರಾದ ಸಿ.ಹೆಚ್.ಗಂಗಾಧರ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಎಸ್ಪಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ನಾಗರಾಜ್, ಆರೋಗ್ಯ ಇಲಾಖೆಯ ರಮ್ಯದೀಪಿಕಾ, ಪ್ರೇಮಾ, ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್ ಹಿರಿಯ ವಕೀಲ ಕೆ.ಆರ್,ಧನರಾಜ್ ಮತ್ತಿತರರು ಉಪಸ್ಥಿತರಿದ್ದರು.