ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಕಾರ್ಯೋನ್ಮುಖರಾಗಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚನೆ

ಚಾಮರಾಜನಗರ, ನ.08-ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಲು ವೈದ್ಯರು, ಆರೋಗ್ಯ ಕಾರ್ಯಕರ್ತರು, ಅಧಿಕಾರಿಗಳು ಸಾರ್ವಜನಿಕರ ಸಹಕಾರದೊಂದಿಗೆ ಸಕ್ರಿಯವಾಗಿ ಕಾರ್ಯೋನ್ಮುಖರಾಗುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೋವಿಡ್–19 ತಡೆ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಕೊರೊನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ ಜಿಲ್ಲೆಯನ್ನು ಕೋವಿಡ್ ನಿಂದ ಮುಕ್ತಗೊಳಿಸಲು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಕ್ರಿಯರಾಗಬೇಕು. ಈ ನಿಟ್ಟಿನಲ್ಲಿ ಕೋವಿಡ್ ಮುಕ್ತ ಜಿಲ್ಲೆಯಾಗಿಸಲು ಅಭಿಯಾನವನ್ನು ಪ್ರಾರಂಭಿಸಬೇಕಾಗಿದೆ ಎಂದರು.
ಪ್ರತಿ ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಮುಕ್ತ ಜಿಲ್ಲೆ ಅಭಿಯಾನಕ್ಕಾಗಿ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಪ್ರೇರೆಪಿಸಬೇಕು. ನಗರ ಸಭೆ, ಪುರಸಭೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೊದಲು ತಾಲ್ಲೂಕುವಾರು ಕೋವಿಡ್ ಮುಕ್ತ ತಾಲ್ಲೂಕುಗಳಾಗಿ ಪರಿವರ್ತಿಸಿದಲ್ಲಿ ಮಾತ್ರ ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಲು ಸಹಕಾರಿಯಾಗುತ್ತದೆ. ಜಿಲ್ಲಾಸ್ವತ್ರೆ ಹಾಗೂ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಬೇಕು. ಸೋಂಕಿತರು, ಸಂಪರ್ಕಿತರನ್ನು ಪತ್ತೆಹಚ್ಚಬೇಕು. ಜಿಲ್ಲಾ ಕಣ್ಗಾವಲು ಘಟಕ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕೋವಿಡ್ ಆಸ್ವತ್ರೆಗಳು ಎಲ್ಲಾ ಸೌಲಭ್ಯಗಳನ್ನು ಹೊಂದಿರಬೇಕು. ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ಲೋಪವಾಗಬಾರದು. ಹೆಚ್ಚಿನ ಮಟ್ಟದಲ್ಲಿ ಔಷಧಗಳ ದಾಸ್ತಾನು ಇರಬೇಕು. ಜಿಲ್ಲಾ ಆಸ್ವತ್ರೆ, ಪ್ರಾಥಮಿಕ ಹಾಗೂ ಸಸಮುದಾಯ ಆರೋಗ್ಯ ಕೇಂದ್ರಗಳು ರಜೆ ದಿನಗಳಂದೂ ಸಹ ಓ.ಪಿ.ಡಿ ಸೇವೆಯನ್ನು ನೀಡಬೇಕು ಎಂದರು.
ಹೆರಿಗೆ ಆಸ್ವತ್ರೆಗಳಲ್ಲಿ ಎಲ್ಲಾ ರೀತಿಯ ಸೌಭ್ಯಗಳೊಳಗೊಂಡಿರುವ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ಅವರು ನಿತ್ಯ ಭೇಟಿ ನೀಡಿ ಪರಿಶೀಲಿಸಬೇಕು. ಇತರೆ ಸಾಂಕ್ರಮಿಕ ರೋಗಗಳಾದ ಕ್ಷಯ, ಮಲೇರಿಯಾ, ಡೇಂಗ್ಯೂ, ಚಿಕನ್ ಗುನ್ಯಾ, ಕುಷ್ಠ ರೋಗ, ಎಚ್.ಐ.ವಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮುನ್ನೆಚರಿಕೆಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತಿಳಿಸಿದರು.
ಅಧಿಕಾರಿಗಳು ಕುಡಿಯುವ ನೀರು ಹಾಗೂ ಆಹಾರ ಪದಾರ್ಥಗಳ ಸುರಕ್ಷತಾ ಗುಣಮಟ್ಟವನ್ನು ಪರಿಶೀಲಿಸಬೇಕು. ಅಗತ್ಯಕಿಂತ ಹೆಚ್ಚುವರಿಯಾಗಿ ರಕ್ತ ನಿಧಿ ಸಂಗ್ರಹವಾಗಬೇಕು. ತಾಯಿ ಮತ್ತು ಮಗುವನ್ನು ಮನೆಗೆ ತಲುಪಿಸುವ ನಗು ಮಗು ವ್ಯವಸ್ಥೆ ಹೆಚ್ಚು ಜನರಿಗೆ ಸಹಾಯವಾಗಬೇಕು. ಜನನಿ ಸುರಕ್ಷಾ ವಾಹನ ಹಾಗೂ 108 ಆಂಬುಲೆನ್ಸ್ ಸೇವೆಯ ಕಾರ್ಯಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ, ಜಿಲ್ಲಾ ಲಸಿಕಾಧಿಕಾರಿ ವಿಶ್ವೇಶ್ವರಯ್ಯ, ಡಾ. ಮಹೇಶ್, ಜಿಲ್ಲಾ ಮಲೇರಿಯ ನಿಯಂತ್ರಣಾಧಿಕಾರಿ ಕಾಂತರಾಜು, ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಇತರೆ ಅಧಿಕಾರಿ ಅವರು ಸಭೆಯಲ್ಲಿ ಹಾಜರಿದ್ದರು.