ಕೋವಿಡ್ ಸಂಕಷ್ಟ: 2 ತಿಂಗಳು ಉಚಿತ ಆಹಾರ ಧಾನ್ಯ ಘೋಷಿಸಿದ ಮೋದಿ

ನವದೆಹಲಿ, ಏ 23- ಕೊರೊನಾ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಯೋಜನೆಯಡಿ ಬಡ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಲು ತೀರ್ಮಾನಿಸಿದೆ.
ಮೇ ಮತ್ತು ಜೂನ್ ಎರಡು​ ತಿಂಗಳ ಆಹಾರ ಧಾನ್ಯಗಳನ್ನು ಬಡ ಕೂಲಿಕಾರ್ಮಿಕ ವರ್ಗದವರಿಗೆ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸರ್ಕಾರ ಬಡವರ ಕಲ್ಯಾಣಕ್ಕೆ ಬದ್ದವಾಗಿದ್ದು, ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆಯಡಿ ಐದು ಕೆಜಿ ಅಕ್ಕಿ ಮತ್ತು ಆಹಾರ ಧಾನ್ಯವನ್ನು ದೇಶದ ಬಡ ಜನರಿಗೆ ನೀಡಲಾಗುವುದು. ದೇಶದ 80 ಕೋಟಿ ಫಲಾನುಭವಿಗಳಿಗೆ ಈ ಯೋಜನೆ ತಲುಪಲಿದೆ. ಇದಕ್ಕಾಗಿ ಸರ್ಕಾರ 26 ಸಾವಿರ ಕೋಟಿ ರೂ ವೆಚ್ಚಮಾಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕಳೆದ ವರ್ಷವೂ ಲಾಕ್​ಡೌನ್​ನಿಂದಾಗಿ ದೇಶದ ಬಡವರು, ಮಹಿಳೆಯರು, ರೈತ ಮತ್ತು ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಉದ್ಯೋಗವಿಲ್ಲದೇ ವಲಸಿಗರು ಸಂಕಷ್ಟಕ್ಕೆ ಸಿಲುಕಿದ್ದರು, ಈ ವೇಳೆ ಕೂಡ ಪ್ರಧಾನ್​ ಮಂತ್ರಿ ಗರೀಬ್​ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.