
ಕೊರೋನಾ ಸಮಯದಲ್ಲಿ ನೊಂದುಬೆಂದ ಜೀವಗಳೆಷ್ಟೋ ಭಿಕ್ಷೆ ನಂಬಿಕೊಂಡು ಜೀವನ ನಡೆಸುತ್ತಿದ್ದ ಭಿಕ್ಷುಕರ ಜೀವನ ಏನಾಗಿರಬೇಡ, ಇದೇ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ಮಾಣವಾದ ಚಿತ್ರ ಭಿಕ್ಷುಕ.
ಯುವ ನಿರ್ದೇಶಕ ಜಿ.ಶಿವಮಣಿ ನಿರ್ದೇಶನದ ಟೀಸರ್ ಬಿಡುಗಡೆ ಹಾಗೂ ಹಾಡುಗಳ ಪ್ರದರ್ಶನ ಈಚೆಗೆ ನಡೆಯಿತು. ಬುಲೆಟ್ ರಾಜ ನಾಯಕ ಹಾಗೂ ನಿರ್ಮಾಪಕ. ಜ್ಯೋತಿ ಮರೂರು ನಾಯಕಿ.
ಈ ವೇಳೆ ಮಾತಿಗಿಳಿದ ನಿರ್ದೇಶಕ ಶಿವಮಣಿ, ಕೊರೋನಾ ಲಾಕ್ ಡೌನ್ ಟೈಮ್ ನಲ್ಲಿ ಹುಟ್ಟಿದ ಕಥೆಯಿದು. ಆ ಸಮಯದಲ್ಲಿ ಭಿಕ್ಷುಕರು ಏನೆಲ್ಲ ತೊಂದರೆ ತಾಪತ್ರೆ ಅನುಭವಿಸಿದರು ಎನ್ನುವುದನ್ನು ಹೇಳುವ ಚಿತ್ರ. ಚಿತ್ರದ ಟೈಟಲ್ ಸಾಂಗನ್ನು ಬಿ.ಆರ್.ಲಕ್ಷ್ಮಣರಾವ್ ಬರೆದಿದ್ದಾರೆ. ಮಕ್ಕಳಾಗಿ ಅನಂದ್ ಗಣೇಶ್, ಪೂಜಾ ನಟಿಸಿದ್ದಾರೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.
ಬುಲೆಟ್ ರಾಜು ಮಾತನಾಡಿ, ಈಗಿನ ಕಾಲಘಟ್ಟಕ್ಕೆ ಈ ಸಿನಿಮಾ ಬೇಕು ಎನಿಸಿತು. ಎಲ್ಲರೂ ಸೇರಿ ಪ್ರೇಕ್ಷಕರ ಮನಮುಟ್ಟುವಂತೆ ಸಿನಿಮಾ ಮಾಡಿದ್ದೇವೆ ಎಂದರು.
ನಟಿ ಜ್ಯೋತಿ ಮರೂರು ಮಾತನಾಡಿ ಚಿತ್ರ ಕಳೆದವರ್ಷವೇ ಆರಂಭವಾಗಿತ್ತು. ಲಾಕ್ ಡೌನ್ ಚಿತ್ರರಂಗವೆ ಬಂದ್ ಆಗಿದ್ದಾಗ ನಿರ್ಮಾಪಕರು ಕೆಲಸ ಕೊಟ್ಟು ಹಣವನ್ನೂ ನೀಡಿದ್ದರು ಎಂದರು.
ಹಿರಿಯನಟ ಬಿರಾದಾರ್ ಮಾತನಾಡಿ ಚಿತ್ರದಲ್ಲಿ ನಾನೂ ಚಿಕ್ಕಪಾತ್ರ ಮಾಡಿದ್ದೇನೆ. ಕಷ್ಟಕಾಲದಲ್ಲಿದ್ದಾಗ ಅನ್ನ ನೀಡಿದ ನಿರ್ಮಾಪಕರಿವರು ಎಂದರು. ಸಂಭಾಷಣೆ ಬರೆದಿರುವ ಎಸ್.ಕೆ.ಸಾಲಿ , ಸಂಗೀತ ನಿರ್ದೇಶಕ ಕಿರಣ್ ವಾಘ ಮಾತನಾಡಿದರು.
ಚಿತ್ರದ ಉಳಿದ ತಾರಾಗಣದಲ್ಲಿ ತಬಲಾನಾಣಿ, ಯತಿರಾಜ್, ಶೋಭರಾಜ್, ಶರತ್ ಲೋಹಿತಾಶ್ವ, ಶಂಖನಾದ ಅರವಿಂದ್ ನಟಿಸಿದ್ದಾರೆ.ಕಿರಣ್ ವಾಘ ಸಂಗೀತ, ನಾಗ್ ಶೆಟ್ಟಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ