ಕೋವಿಡ್ ಸಂಕಷ್ಟದಲ್ಲಿ ಗ್ರಾಮೀಣರ ನೆರವಿಗೆ ಉದ್ಯೋಗಖಾತ್ರಿ ಯೋಜನೆ

ದಾವಣಗೆರೆ, ಮೇ.29: ಕೋವಿಡ್ ಮಹಾಮಾರಿಯಿಂದ ಸಂಕಷ್ಟದಲ್ಲಿರುವ ಗ್ರಾಮೀಣ ಜನರಿಗೆ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಉದ್ಯೋಗ ದೊರಕಿಸುವ ಮೂಲಕ ಕೂಲಿಕಾರರ ಕೈಹಿಡಿದಿದೆ. ಜಿಲ್ಲೆಯಲ್ಲಿ ಈ ವರ್ಷ ಒಟ್ಟು 4.90 ಲಕ್ಷ ಮಾನವ ದಿನಗಳ ಸೃಜನೆಯಾಗಿದ್ದು, 16.18 ಕೋಟಿ ರೂ. ಕೂಲಿ ಪಾವತಿಸಲಾಗಿದೆ. ಜಿಲ್ಲೆಯಲ್ಲಿ ಮಹಿಳೆಯರಿಂದಲೇ ಅಧಿಕ ಮಾನವ ದಿನ ಸೃಜನೆಯಾಗಿರುವುದು ವಿಶೇಷ. ನರೇಗಾ ಯೋಜನೆಯಲ್ಲಿ ಫಲಾನುಭವಿಗಳಿಗೆ ಪ್ಯಾಕೇಜ್ ಮಾದರಿಯಲ್ಲಿ ಸೌಲಭ್ಯಗಳನ್ನು ದೊರಕಿಸಿಕೊಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಈ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಹೆಚ್ಚು ಸದುಪಯೋಗಪಡಿಸಿಕೊಳ್ಳಬೇಕು. ಆದರೆ ಕೋವಿಡ್-19 ಎರಡನೇ ಅಲೆಯಲ್ಲಿ ಹೆಚ್ಚು ಗ್ರಾಮಗಳಲ್ಲಿ ಸೋಂಕು ಹರಡುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ಮುಂದೆ ಬಾರದಿರುವುದೂ ಸಹ ಕಂಡುಬಂದಿದೆ. ಈ ವರ್ಷ ಜಿಲ್ಲೆಯಲ್ಲಿ 48686 ಗ್ರಾಮೀಣರಿಗೆ ಉದ್ಯೋಗಖಾತ್ರಿಯಡಿ ಕೆಲಸ ನೀಡುವ ಮೂಲಕ 4.90 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ. ನರೇಗಾ ಯೋಜನೆ ಅಡಿ ಹಳ್ಳಿಗಳಲ್ಲಿ ಕೆರೆ ಹೂಳೆತ್ತುವುದು, ಗೋಕಟ್ಟೆ ಹೂಳೆತ್ತುವುದು, ಕೊಳವೆ ಬಾವಿ ಮರುಪೂರಣ ಘಟಕ, ಮೈದಾನ, ಕಣ, ಚೆಕ್ ಡ್ಯಾಂ, ಹೊಲಗಳಿಗೆ ಹೋಗಲು ದಾರಿ, ಕೃಷಿ ಹೊಂಡ, ಅಂಗನವಾಡಿ ಕೇಂದ್ರ, ಗ್ರಾಮೀಣ ಗೋದಾಮು, ಸ್ಮಶಾನ ಅಭಿವೃದ್ಧಿ, ಉದ್ಯಾನ, ಕಾಂಕ್ರಿಟ್ ರಸ್ತೆ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಬಹುದಾದ ಅನೇಕ ಉದ್ಯೋಗಗಳನ್ನು ನೀಡಲಾಗುತ್ತಿದ್ದು, ಗುಂಪುಗೂಡಿ ಮಾಡಬಹುದಾದ ಕಾಮಗಾರಿ ಸ್ಥಳಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಾನವ ದಿನಗಳ ಗುರಿ: ಕೋವಿಡ್ ಲಾಕ್‌ಡೌನ್ ಕಾರಣದಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನರೇಗ ಯೋಜನೆ ಆರ್ಥಿಕವಾಗಿ ಶಕ್ತಿ ತುಂಬಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ ನರೇಗಾ ಅಡಿಯಲ್ಲಿ 31 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಿದ್ದು, ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 4,90,614 ಮಾನವ ದಿನಗಳನ್ನು ಸೃಷ್ಟಿ ಮಾಡಲಾಗಿದೆ. ಕಳೆದ ವರ್ಷ 40 ಲಕ್ಷ ಗುರಿ ನೀಡಿದ್ದು, ಒಟ್ಟು 34,10,305 ಮಾನವ ದಿನಗಳನ್ನು ಸೃಜಿಸಲಾಗಿತ್ತು.
ಗ್ರಾಮೀಣರು ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸಿ, ಹೆಚ್ಚು ಹೆಚ್ಚು ಕೆಲಸ ಪಡೆಯಲು ಮುಂದಾಗಬೇಕಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಆನಂದ್ ಹೇಳಿದರು.