ಕೋವಿಡ್ ವ್ಯಾಪಕ ಹರಡುವಿಕೆ ತಡೆಗೆ ಕ್ರಮ ವಹಿಸಿ: ಡಿ.ಸಿ

ಬೀದರ.ಮಾ.19: ಜಿಲ್ಲೆಯಲ್ಲಿ ಕರೋನಾ ವೈರಸ್ (ಕೋವಿಡ್-19) ವ್ಯಾಪಕವಾಗಿ ಹರಡುತ್ತಿದೆ. ಬೀದರ ಜಿಲ್ಲೆಯನ್ನು ರೆಡ್ ಅಲರ್ಟ್ ಪ್ರದೇಶವೆಂದು ಕೂಡ ಈಗಾಗಲೇ ಪರಿಗಣಿಸಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕರೋನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಧಾರ್ಮಿಕ ಸ್ಥಳ, ಕಲ್ಯಾಣ ಮಂಟಪ, ಫಂಕ್ಷನ್ ಹಾಲ್‍ಗಳಲ್ಲಿ ಜರುಗುವ ಸಭೆ, ಆಚರಣೆ, ಮದುವೆ ಸಮಾರಂಭಗಳಲ್ಲಿ ಹೆಚ್ಚುವರಿ ಜನ ಸೇರಿಸುವುದನ್ನು ನಿಷೇಧಿಸುವುದು ಅತೀ ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಸಾಮಾಜಿಕ ಆಚರಣೆಗಳು, ಸಮಾರಂಭಗಳಲ್ಲಿ ಭಾರತ ಸರ್ಕಾರದ ಮಾರ್ಗಸೂಚಿಯಂತೆ 3.25 ಸ್ಕ್ವಾಯೇರ್ ಮೀಟರ್ ಪರ್ ಪರಸನ್ ಮಾನದಂಡವನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
ಮದುವೆಯಲ್ಲಿ ತೆರೆದ ಪ್ರದೇಶಗಳಲ್ಲಿ 500 ಮೀರದಂತೆ ಸಭಾಂಗಣಗಳು, ಹಾಲ್‍ಗಳು, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 200 ಮೀರದಂತೆ ಸಾರ್ವಜನಿಕರ ಸಂಖ್ಯೆಗೆ ಮಾತ್ರ ಸೀಮಿತಗೊಳಿಸಿ ಅವಕಾಶ ನೀಡಲಾಗಿದೆ.
ಜನ್ಮದಿನ ಹಾಗೂ ಇತರ ಆಚರಣೆಗಳಲ್ಲಿ ತೆರೆದ ಪ್ರದೇಶಗಳಲ್ಲಿ 100 ಮೀರದಂತೆ ಹಾಗೂ ಸಭಾಂಗಣಗಳು, ಹಾಲ್‍ಗಳು ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 50 ಮೀರದಂತೆ ಸಾರ್ವಜನಿಕರ ಸಂಖ್ಯೆಗೆ ಮಾತ್ರ ಸೀಮಿತಗೊಳಿಸಿ ಅವಕಾಶ ನೀಡಲಾಗಿದೆ.
ನಿಧನ, ಶವಸಂಸ್ಕಾರಕ್ಕೆ ತೆರೆದ ಪ್ರದೇಶಗಳಲ್ಲಿ 100 ಮೀರದಂತೆ ಮತ್ತು ಸಭಾಂಗಣಗಳು ಮತ್ತು ಹಾಲ್‍ಗಳು, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 50 ಮೀರದಂತೆ ಅವಕಾಶ ಕಲ್ಪಿಸಲಾಗಿದೆ.
ಇತರೆ ಸಮಾರಂಭಗಳಲ್ಲಿ ಹಾಲ್‍ನ ವಿಸ್ತೀರ್ಣಕ್ಕೆ ಅನುಗುಣವಾಗಿ 100 ಮೀರದಂತೆ ಜನ ಸೇರಲು ಅವಕಾಶ ಕಲ್ಪಿಸಲಾಗಿದೆ.
ಧಾರ್ಮಿಕ ಆಚರಣೆಗಳು ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 500 ಮೀರದಂತೆ ಜನ ಸೇರಲು ಅವಕಾಶ ಕಲ್ಪಿಸಲಾಗಿದೆ. ರಾಜಕೀಯ ಆಚರಣೆಗಳು ಸಮಾರಂಭಗಳಲ್ಲಿ ತೆರೆದ ಪ್ರದೇಶಗಳಲ್ಲಿ 500 ಮೀರದಂತೆ ಜನ ಸೇರಲು ಅವಕಾಶ ಕಲ್ಪಿಸಲಾಗಿದೆ.
ಇದಕ್ಕೆ ತಪ್ಪಿದಲ್ಲಿ ಸಂಬಂಧಪಟ್ಟ ಧಾರ್ಮಿಕ ಸ್ಥಳ, ಕಲ್ಯಾಣ ಮಂಟಪ ಸಮಿತಿ ಮತ್ತು ಫಂಕ್ಷನ್ ಹಾಲ್‍ಗಳ ಮಾಲೀಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.