ಕೋವಿಡ್ ವ್ಯಾಕ್ಸಿನ್ ಸುರಕ್ಷಿತವಾಗಿದೆ ಎಲ್ಲರೂ ತೆಗೆದುಕೊಳ್ಳಿ – ಆರ್.ಜೆ. ಸತೀಶ್ ಸಿಂಗ್

ಕಲಬುರಗಿ,ಏ.7-ಕೋವಿಡ್ ವ್ಯಾಕ್ಸಿನ್ ಸುರಕ್ಷತೆಯಿಂದ ಕೂಡಿದೆ. ನಾನು ಸಹ ಲಸಿಕೆ ಪಡೆದುಕೊಂಡು ಒಳ್ಳಯ ಅನುಭವವಾಗುತ್ತಿದೆ. ಹೀಗಾಗಿ ಜನಸಾಮಾನ್ಯರು ಕೂಡ ನಿರ್ಭಿತವಾಗಿ ಲಸಿಕೆ ತೆಗಿದುಕೊಳ್ಳಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಜೆ ಸತೀಶ್ ಸಿಂಗ್ ಅವರು ಮನವಿ ಮಾಡಿಕೊಂಡರು.
ನಗರ ಸೇಡಂ ರಸ್ತೆಯಲ್ಲಿರುವ ಇ.ಎಸ್.ಐ ಆಸ್ಪತ್ರೆಯಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ನ್ಯಾವಾದಿಗಳ ಸಂಘ ಹಾಗೂ ಜಿಲ್ಲಾ ಅರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಕೋವಿಡ್-19 ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮದಲ್ಲಿ ಕೋವಿಡ್ ಲಸಿಕೆ ಪಡೆಯುವ ಮೂಲಕ ಅವರು ಚಾಲನೆ ನೀಡಿದರು.
ಜಿಲ್ಲಾ ನ್ಯಾಯಾಲಯದ ಎಲ್ಲಾ ನ್ಯಾಯಾದೀಶರು ಲಸಿಕೆ ಪಡೆಯುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಜಿಲ್ಲೆಯ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆದುಕೊಂಡು ಕೋವಿಡ್ ನ್ನು ಸೋಲಿಸುವ ಪಣತೋಡೋಣ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯಾಧೀಶ ಜಿ.ಆರ್. ಶೆಟ್ಟರ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ್ ಮಾಲಿ ಹಾಗೂ ಜಿಲ್ಲಾ ನ್ಯಾಯಾಲಯಗಳ ಎಲ್ಲಾ ನ್ಯಾಯಾಧೀಶರು ಉಪಸ್ಥಿತರಿದ್ದರು.