ಕೋವಿಡ್ ವಾರಿಯರ್‍ಸ್‌ಗೆ ಚೈತನ್ಯ ಕೇಂದ್ರ ಆರಂಭ

ಬೆಂಗಳೂರು, ಮೇ.೨- ಕೋವಿಡ್ ಸೋಂಕಿತರ ಸೇವೆಯಲ್ಲಿ ಹಗಲಿರುಳೆನ್ನದೇ ತೊಡಗಿಸಿಕೊಂಡಿರುವ ’ಕೋವಿಡ್ ವಾರಿಯರ್ಗಳ ವಿಶ್ವಾಸ ವೃದ್ಧಿಸುವ ಇಂದಿನಿಂದ ಚೈತನ್ಯ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ರಾಜಾಜಿನಗರದಲ್ಲಿ ಚೈತನ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕೇಂದ್ರಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ, ದಾದಿಯರಿಗೆ, ವೈದ್ಯರಿಗೆ ಹಾಗೂ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರುಗಳಿಗೆ ಮೀಸಲಿಡಲಾಗಿದೆ ಎಂದರು.
ಇಲ್ಲಿ ಸ್ವನಿಯಂತ್ರಿತ ಹವಾ ಸೇವನೆ ಹಾಗೂ ಕುಡಿಯಲು ಬಿಸಿನೀರನ್ನು ನಿರಂತರವಾಗಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಅವರ ಸೇವೆಯನ್ನು ಗೌರವಿಸುವ ಒಂದು ಪ್ರಯತ್ನ ಇದಾಗಿದ್ದು, ಇದರಿಂದ ಸಮಾಜದಲ್ಲಿ ವಿಶ್ವಾಸ ವೃದ್ಧಿಸುವ ಕಾರ್ಯವಾದರೆ ತಮ್ಮ ಶ್ರಮ ಸಾರ್ಥಕ ಎಂದು ನುಡಿದರು.
ಆಂಬ್ಯುಲೆನ್ಸ್ ಸೇವೆಯ ಜೊತೆಗೆ ಸುಮಾರು ೨೦ ಆಮ್ಲಜನಕ ಸಿಲಿಂಡರ್ ಗಳ ಮೂಲಕ ಅಗತ್ಯವಿರುವ ವ್ಯಕ್ತಿಗಳಿಗೆ ಮನೆಗಳಿಗೆ ಆಮ್ಲಜನಕ ಪೂರೈಸುವ ಕಾರ್ಯ ಕೂಡಾ ಇಂದು ಪ್ರಾರಂಭವಾಗಿದೆ ಎಂದ ಅವರು,
ಭಾಷ್ಯಂ ವೃತ್ತದ ಬಳಿಯಿರುವ ಡಾಕ್ಟರ್ ನಾಗರಾಜ ಆಸ್ಪತ್ರೆಯಲ್ಲಿ ೨೦ ಆಮ್ಲಜನಕ ಪೂರೈಕೆಯುಳ್ಳ ಬೆಡ್ ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಕೇಂದ್ರದ ಕಾರ್ಯಾರಂಭವಾಗಲಿದೆ ಎಂದು ತಿಳಿಸಿದರು.