ಕೋವಿಡ್ ಲಾಕ್ ಡೌನ್: ಕಲಾವಿದರಿಗೆ ವಿಶೇಷ ಪ್ಯಾಕೇಜ್ ನೀಡಲು ಮನವಿ

ಚಿತ್ರದುರ್ಗ,ಏ.29:ಕೋವಿಡ್-19 ಲಾಕ್ಡೌನ್ ಸಮಸ್ಯೆಯಿಂದಾಗಿ ಸಾಮಾಜಿಕ ಮತ್ತು ರಂಗಭೂಮಿ ಕಲಾವಿದರಿಗೆ ಕಾರ್ಯಕ್ರಮಗಳಿಲ್ಲದೆ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಜಿಲ್ಲೆಯ ಕಲಾವಿದರ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಒತ್ತಾಯಿಸಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆಯವರು ಇಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಾಸಾಶನ ಪಡೆಯುತ್ತಿರುವ 253 ಕಲಾವಿದರು ಸೇರಿದಂತೆ ನೂರಾರು ಜನಪದ ಮತ್ತು ರಂಗಭೂಮಿ ಕಲಾವಿದರ ಬದುಕು ಕೋಮಿಡ್-19 ಪರಿಣಾಮ ಸಂಕಷ್ಟಕ್ಕೆ ಒಳಗಾಗಿದೆ. 2020ರ ಮಾರ್ಚ್ ತಿಂಗಳಿನಿಂದ ಬೀದಿ ನಾಟಕವಾಗಲೀ ಮತ್ತು ಜನಪದ ಉತ್ಸವಗಳ ಆಯೋಜನೆ ಸ್ಥಗಿತವಾಗಿದೆ. ಇದರಿಂದ ಯಾವುದೇ ಗಿರಿಜನ ಉತ್ಸವ, ಜನಪದ ಜಾತ್ರೆ, ಸುಗ್ಗಿ-ಹುಗ್ಗಿ ಕಾರ್ಯಕ್ರಮಗಳು ಸೇರಿದಂತೆ ಪ್ರಾಯೋಜಿತ ಕಲಾತಂಡಗಳ ಕಾರ್ಯಕ್ರಮಗಳಿಗೂ ನಿಬಂಧನೆಗಳನ್ನು ಮಾಡಿರುವುದರಿಂದ ಕಲಾ ಪ್ರದರ್ಶನದಿಂದ ಜೀವನ ಕಟ್ಟಿಕೊಂಡಿರುವ ನೂರಾರು ಕಲಾವಿದರ ಬದುಕು ಬೀದಿಗೆ ಬಂದಂತಾಗಿದೆ.ಶಾಲಾ-ಕಾಲೇಜುಗಳು ರದ್ದಾಗಿರುವುದರಿಂದ ಕಲಾ ತಂಡಗಳಿಗೆ ಅವಕಾಶಗಳು ಸಿಗುತ್ತಿಲ್ಲ. ಬೀದಿ ನಾಟಕ ಪ್ರದರ್ಶನ ಮಾಡಿ ಜೀವನ ಮಾಡುವ ಕಲಾವಿದರಿದ್ದು, ಕಲಾ ಪ್ರದರ್ಶನಗಳಿಗೆ ಸಾಮಾಜಿಕ ಅಂತರ ಮತ್ತು ಕೋವಿಡ್-19 ನಿಯಂತ್ರಣ ನಿಯಮಗಳು ಅಡ್ಡಿಯಾಗುತ್ತಿವೆ. ಇದರಿಂದ ಕಲಾವಿದರಿಗೆ ವೃತ್ತಿ ಬದುಕು ಇಲ್ಲದಂತಾಗಿ ಜೀವನ ನಿರ್ವಹಣೆ ಮತ್ತು ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ತೀವ್ರ ಸಂಕಷ್ಟ ಎದುರಿಸುತ್ತಿರುವ ಕಲಾವಿದರಿಗೆ ಜಿಲ್ಲಾಡಳಿತ ವಿಶೇಷ ಪ್ಯಾಕೇಜ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ತಿಪ್ಪೇಸ್ವಾಮಿ, ಕಾರ್ಯದರ್ಶಿ ದಯಾನಂದಸಾಗರ, ಜಗನ್ನಾಥ ಹಾಜರಿದ್ದರು.