ಕೋವಿಡ್ ಲಾಕ್‍ಡೌನ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಿಎಂ ಬಿಎಸ್‍ವೈ ಸೂಚನೆ

ಬಳ್ಳಾರಿ,ಏ.30:ರಾಜ್ಯದಲ್ಲಿ ಕೋವಿಡ್ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 12ರವರೆಗೆ ಹೊರಡಿಸಲಾಗಿರುವ ನಿರ್ಬಂಧಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೋವಿಡ್‍ಗೆ ಸಂಬಂಧಿಸಿದಂತೆ ಎಲ್ಲ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು,ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ನಡೆದ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಅವರು ಸೂಚನೆ ನೀಡಿದರು.
ಹೊರಡಿಸಲಾಗಿರುವ ನಿಬರ್ಂಧದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು;ಅಂದಾಗ ಮಾತ್ರ ಕೋವಿಡ್ ಕಡಿಮೆಯಾಗಲು ಸಾಧ್ಯ.ಇಲ್ಲದಿದ್ದಲ್ಲಿ ಇನ್ನೂ 8-10 ದಿನ ಲಾಕ್‍ಡೌನ್ ಮಾಡಬೇಕಾಗುತ್ತದೆ;ಇದರಿಂದ ಜನರಿಗೆ ಅನಗತ್ಯ ತೊಂದರೆಯಾಗಲಿದ್ದು,ಇದಕ್ಕೆ ಅಸ್ಪದ ಮಾಡಿಕೊಡಬೇಡಿ ಎಂದು ಅವರು ಹೇಳಿದರು.
ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಎನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನು ಕೈಗೊಳ್ಳಿ;ಸರಕಾರದಿಂದ ತಮಗೆ ಯಾವೆಲ್ಲವುಗಳ ಅಗತ್ಯವಿದೆಯೋ ಅವುಗಳನ್ನೆಲ್ಲ ಒದಗಿಸಲಾಗುವುದು ಎಂದು ಅವರು ಹೇಳಿದರು.
*ಅನವಶ್ಯಕ ರೆಮ್ಡಿಸಿವಿರ್ ಬಳಕೆ ಸಲ್ಲದು: ಕೆಲವು ಜಿಲ್ಲೆಗಳಲ್ಲಿ ಅನವಶ್ಯಕವಾಗಿ ರೆಮ್ಡೆಸಿವಿರ್ ಲಸಿಕೆಗಳನ್ನು ರೋಗಿಗಳಿಗೆ ನೀಡುತ್ತಿರುವುದು ಕಂಡುಬಂದಿದ್ದು, ಇದು ಸರಿಯಾದ ಕ್ರಮವಲ್ಲ. ಅವಶ್ಯಕತೆ ಇರುವವರಿಗೆ ಮಾತ್ರ ನೀಡಿ ಎಂದು ಸೂಚನೆ ನೀಡಿದರು.
ನಿಯಮಾನುಸಾರ ರೆಮ್ಡೆಸಿವಿರ್ ನೀಡಲು ಕ್ರಮವಹಿಸಿ;ಖಾಸಗಿ ವೈದ್ಯರಿಗೆ ವಿನಾಕಾರಣ ರೆಮ್ಡೆಸಿವಿರ್ ಇಂಜೆಕ್ಷನ್ ಬೇಡಿಕೆವಿರಿಸದಂತೆ ಸಭೆ ನಡೆಸಿ ಸೂಚನೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಹಾಗೂ ಡಿಸಿಗಳಿಗೆ ಸೂಚಿಸಿದರು.
ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್ ಅವರು ಮಾತನಾಡಿ, 14 ದಿನಗಳ ಲಾಕ್‍ಡೌನ್ ಸಂದರ್ಭದಲ್ಲಿ ಲಕ್ಷಾಂತರ ಜನರು ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಬಂದಿದ್ದು,ಅವರನ್ನು ಪತ್ತೆಹಚ್ಚಿ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದಲ್ಲಿರುವ ಕೋವಿಡ್ ಟಾಸ್ಕ್‍ಫೋರ್ಸ್‍ಗಳನ್ನು ಬಲಪಡಿಸಬೇಕು. ನಿರ್ಬಂಧ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು.
ಕೋವಿಡ್ ವ್ಯಾಪಕವಾಗಿ ಹರಡದಂತೆ ಕ್ರಮವಹಿಸಬೇಕು ಮತ್ತು ಕೋವಿಡ್ ಕೇರ್ ಸೆಂಟರ್‍ಗಳನ್ನು ಸಿದ್ಧತೆ ಮಾಡಿಟ್ಟುಕೊಳ್ಳಿ ಎಂದು ಸೂಚಿಸಿದ ಅವರು ರೋಗಲಕ್ಷಣವಿರುವವರು ಮತ್ತು ಸಂಪರ್ಕಿತರನ್ನು ತಪಾಸಣೆ ಮಾಡಿ ಅಗತ್ಯ ಚಿಕಿತ್ಸೆ ನೀಡಿ ಎಂದರು.
ಯಾವ ಸಿಬ್ಬಂದಿಗಳ ಅವಶ್ಯಕತೆಯಿದೆಯೋ ಆ ಇಲಾಖೆಯ ಸಿಬ್ಬಂದಿಗಳನ್ನು ಕೋವಿಡ್ ಕಾರ್ಯಕ್ಕೆ ಬಳಸಿಕೊಳ್ಳಿ;ಈಗಾಗಲೇ ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಕಲಬುರಗಿ ಜಿಲ್ಲೆಯ ಕೋವಿಡ್ ಸ್ಥಿತಿಗತಿ ವಿವರಿಸುವ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಡಳಿತ ಆಕ್ಸಿಜನ್ ನೆರವನ್ನು ಕಲ್ಪಿಸುವ ಮೂಲಕ ನೆರವಿಗೆ ಧಾವಿಸಿರುವುದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಜಿಲ್ಲೆಯ ಕೋವಿಡ್ ಸ್ಥಿತಿಗತಿ,ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ,ಡಾ.ಸಿ.ಎನ್.ಅಶ್ವತ್‍ನಾರಾಯಣ, ಕಂದಾಯ ಸಚಿವ ಆರ್.ಅಶೋಕ, ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಬಳ್ಳಾರಿಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ,ಎಸ್ಪಿ ಸೈದುಲು ಅಡಾವತ್ ಮತ್ತಿತರರು ಇದ್ದರು.