ಕೋವಿಡ್ ಲಸಿಕೋತ್ಸವ ಪ್ರಾರಂಭ ಮಾಡಿ

ಚಿತ್ರದುರ್ಗ, ಏ.26; ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣ ಏರಿಕೆ ಮಾಡುವ ದೃಷ್ಠಿಯಿಂದ ಕೋವಿಡ್ ಲಸಿಕೋತ್ಸವ ಪ್ರಾರಂಭ ಮಾಡಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್-19 ರೋಗ ತಡೆ ಕಾರ್ಯಕ್ರಮಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್-19 ಎರಡನೇ ಅಲೆ ಹೆಚ್ಚಳವಾಗುತ್ತಿದ್ದರೂ ಶೇ.50 ರಷ್ಟು ಲಸಿಕಾ ಪ್ರಮಾಣ ಗುರಿ ತಲುಪಲು ಸಾಧ್ಯವಾಗಿಲ್ಲ. ಇದರಿಂದ ಅಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಅನುಮಾನ ಮೂಡುತ್ತಿದೆ. ಅಧಿಕಾರಿಗಳು ಜಾಗೃತಿವಹಿಸಿ ಕಾರ್ಯನಿರ್ವಹಿಸಬೇಕು. ಕೋವಿಡ್ ಲಸಿಕಾ ಉತ್ಸವಕ್ಕೆ ಹೆಚ್ಚಿನ ಗಮನ ಕೊಡಬೇಕು ಎಂದು ತಾಕೀತು ಮಾಡಿದರು.  
ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಅಂದೋಲನ ಹಮ್ಮಿಕೊಂಡು, ಜಿಲ್ಲೆಯ ಎಲ್ಲ ಗ್ರಾಮದ ಜನರಿಗೆ ಲಸಿಕೆ ನೀಡಬೇಕು. ಗ್ರಾಮದ ಎಲ್ಲ ಜನರು ಲಸಿಕೆ ಪಡೆದರೆ ಆ ಗ್ರಾಮವನ್ನು ಲಸಿಕೆ ಪಡೆದ ಗ್ರಾಮ ಎಂದು ಘೋಷಣೆ ಮಾಡಬೇಕು. ಈ ಕಾರ್ಯಕ್ಕೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ  ಹಾಗೂ ಗ್ರಾಮ ಸದಸ್ಯರು ಕೈಜೋಡಿಸಿ ರಾಜ್ಯಕ್ಕೆ ಮಾದರಿಯಾಗೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು. ಯಾವುದೇ ಕಾರಣಕ್ಕೂ ಅರ್ಧದಲ್ಲಿಯೇ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಹೊರಗೆ ಹಾಕಬಾರದು. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಇಂತಹ ಆಸ್ಪತ್ರೆಗಳ ಮೇಲೆ ಪ್ರಕರಣ ದಾಖಲಿಸಲು ಯಾರು ಮುಂದಾಗುತ್ತಿಲ್ಲ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ 191 ಲಸಿಕಾ ತಂಡಗಳ ಮೂಲಕ ಲಸಿಕೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಸಿಕೆ ನೀಡಲು ಗುರಿ ನಿಗಧಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ಶೇ.47 ರಷ್ಟು ಲಸಿಕೆ ಹಾಕಲಾಗಿದೆ ಎಂದು ಹೇಳಿದರು.
 ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ ಸದ್ಯ 877 ಸಕ್ರಿಯ ಪ್ರಕರಣಳಿದ್ದು, 658 ಪ್ರಕರಣಗಳಿಗೆ ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳ ಡಿಸಿಹೆಚ್ ಆಸ್ಪತ್ರೆಯಲ್ಲಿ 38 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 15 ಮಂದಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಚಿಕಿತ್ಸೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ರೋಗ ಲಕ್ಷಣಗಳಿಲ್ಲದ ಕೋವಿಡ್ ಸೋಂಕಿತರಿಗೆ ಶೇ.90 ರಷ್ಟು ಜನರಿಗೆ ಹೋಂ ಐಸೋಲೇಷನ್‍ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಮನೋರೋಗ ತಜ್ಞರಿಂದ ಕೌನ್ಸಿಲ್‍ಗೆ ಸಹ ಮಾಡಲಾಗುತ್ತಿದೆ ಎಂದರು.
ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಬೇಕು. ಸರಿಯಾದ ಮಾರ್ಗದರ್ಶನ, ಮಾನಸಿಕ ಸ್ಥೈರ್ಯ ಇಲ್ಲದೇ ಇರುವುದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಸಮಸ್ಯೆ ಉಂಟಾಗುತ್ತಿದೆ. ಹಾಗಾಗಿ ಹೋಂ ಐಸೋಲೇಷನ್ ಇರುವವರನ್ನು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸಂಸದರು ಸೂಚಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜಪ್ಪ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ 30 ವೆಂಟಿಲೇಟರ್‍ಗಳಿವೆ. 12 ವೆಂಟಿಲೇಟರ್‍ಗಳಲ್ಲಿ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್ ಅಪರೇಟ್ ಮಾಡಲು 10 ಮಂದಿ ಟೆಕ್ನಿಷಿಯನ್, ತಲಾ 5 ಮಂದಿ ಅನಸ್ತೇಶಿಯಾ ಹಾಗೂ ಫಿಜಿಶಿಯನ್ ವೈದ್ಯರ ತುರ್ತು ಅಗತ್ಯವಿದೆ ಎಂದು ಹೇಳಿದರು.
 ವೆಂಟಿಲೇಟರ್ ಸಮರ್ಪಕ ಬಳಕೆಯಾಗಲಿ: ಜಿಲ್ಲಾಸ್ಪತ್ರೆಯಲ್ಲಿ ಇರುವ ವೆಂಟಿಲೇಟರ್‍ಗಳು ಸಮರ್ಪಕವಾಗಿ ಬಳಕೆಯಾಗಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು.
 ಯಾವುದೇ ಕಾರಣಕ್ಕೂ ವೆಂಟಿಲೇಟರ್ ಇಟ್ಟುಕೊಂಡು ಉಪಯೋಗಕ್ಕೆ ಬಾರದ ರೀತಿಯಲ್ಲಿ ಇರಬಾರದು. ವೆಂಟಿಲೇಟರ್ ಅಪರೇಟ್ ಮಾಡಲು ಅವಶ್ಯಕ ಇರುವ ಅನಸ್ತೇಶಿಯಾ ವೈದ್ಯರು ಹಾಗೂ ಟೆಕ್ನಿಕಲ್ ಅಪರೇಟರ್ ನಿಯೋಜನೆ ಮಾಡಿಕೊಳ್ಳಬೇಕು. ವೆಂಟಿಲೇಟರ್ ಬಳಕೆ ಮಾಡಿ ಕೋವಿಡ್ ಸೋಂಕಿನ ಮರಣ ಹೊಂದುವವರ ಪ್ರಮಾಣವನ್ನು ತಗ್ಗಿಸಬೇಕು ಎಂದರು.
 ಜಿಲ್ಲೆಯಲ್ಲಿ ಆಕ್ಸಿಜನ್ ಹಾಗೂ ರೆಮ್‍ಡಿಸಿವಿರ್ ಕೊರತೆ ಆಗಬಾರದು.  ಇವುಗಳನ್ನು ಸಂಗ್ರಹ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಮಾಡುವ ಕುರಿತು ಚರ್ಚಿಸಿದ ಅವರು, ಜಿಲ್ಲೆಯಲ್ಲಿ ಆಕ್ಸಿಜನ್ ಘಟಕ ಸ್ಥಾಪನೆ ಮಾಡುವ ಸಂಬಂಧ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಆರ್‍ಟಿಪಿಸಿಆರ್ ಲ್ಯಾಬ್ ತೆರೆಯಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲು ಜಿಲ್ಲಾಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.
ಜನಸಂದಣಿ, ಕೃಷಿ ಮಾರುಕಟ್ಟೆ ಪ್ರಾಂಗಣ, ಸಂತೆ, ತರಕಾರಿ ಮಾರುಕಟ್ಟೆ ಸೇರಿದಂತೆ ಜನರು ಗುಂಪು ಗೂಡುವ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಸೋಂಕು ಹರಡುವಿಕೆಯನ್ನು ತಪ್ಪಿಸಲು ಪೊಲೀಸರು ಹೆಚ್ಚು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಂಸದರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಕೆ. ನಂದಿದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಫಾಲಾಕ್ಷ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್-19 ರೋಗ ತಡೆ ಕಾರ್ಯಕ್ರಮಗಳ ಕುರಿತು ಸಂಸದ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.