ಕೋವಿಡ್ ಲಸಿಕೆ ವಿಶೇಷ ಶಿಬಿರ ಉದ್ಘಾಟನೆ

ಕಲಬುರಗಿ.ಮೇ.31:ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 18 ರಿಂದ 44 ವರ್ಷದೊಳಗಿನ ಹಾಗೂ 45 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ, ಅವರ ಆರೈಕೆ ದಾರರಿಗೆ ಇದರಲ್ಲಿ ವಿಶೇಷವಾಗಿ ಬುದ್ಧಿಮಾಂದ್ಯರು, ಮಾನಸಿಕ ಅಸ್ವಸ್ಥರು ಮತ್ತು ತೀವ್ರತರನಾದ ವಿಕಲಚೇತನರಿಗೆ ಆದ್ಯತೆ ಮೇರೆಗೆ ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಕೋವಿಡ್ ಲಸಿಕೆ ನೀಡುವ ವಿಶೇಷ ಶಿಬಿರವನ್ನು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಸುಬ್ರಮಣ್ಯ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಜಿ.ಆರ್. ಶೆಟ್ಟರ್ ಅವರು ಶನಿವಾರ ಉದ್ಘಾಟಿಸಿದರು.

  ಈ ಕೋವಿಡ್ ಲಸಿಕಾ ವಿಶೇಷ ಶಿಬಿರದಲ್ಲಿ ಒಟ್ಟು 50 ಜನ ವಿಕಲಚೇತನರು ಹಾಗೂ ಅವರ ಆರೈಕೆದಾರರು ಲಸಿಕೆಯನ್ನು ಪಡೆದಿರುತ್ತಾರೆ. ಈ  ಸಂದರ್ಭದಲ್ಲಿ ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಖಾನ್, ಬುದ್ದಿಮಾಂದ್ಯ ಮಕ್ಕಳ ಆರೈಕೆದಾರರು., ಸ್ವಯಂ ಸೇವಾ ಸಂಸ್ಥೆಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.