ಕೋವಿಡ್ ಲಸಿಕೆ ವಿತರಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಹಾವೇರಿ:ಜ.14- ಜಿಲ್ಲೆಯ ಕೋವಿಡ್ ವಾರಿಯರ್‍ಗಳಿಗೆ ಜನವರಿ 16 ರಿಂದ ಮೊದಲ ಸುತ್ತಿನ ಕೋವಿಡ್ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಲಿದೆ. ಲೋಪವಾಗದಂತೆ ಮಾರ್ಗಸೂಚಿ ಅನ್ವಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ರಸ್ತೆ ಮೂಲಕ ವಿಶೇಷ ಸುರಕ್ಷಿತ ವಾಹನದಲ್ಲಿ ಬುಧವಾರ ರಾತ್ರಿ ಹಾವೇರಿಗೆ ಆಗವಿಸುವ ಲಸಿಕಾ ಪೆಟ್ಟಿಗೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿರುವ ಜಿಲ್ಲಾ ಲಸಿಕಾ ಉಗ್ರಾಣದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ನಾಲ್ಕು ಸಾವಿರ ಲಸಿಕೆ ಜಿಲ್ಲೆಗೆ ಬರಲಿದೆ. ಮೊದಲ ಸುತ್ತಿನ ಲಸಿಕಾಕರಣದಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಈಗಾಗಲೇ ನೋಂದಾಯಿತರಾಗಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಆರೋಗ್ಯ ಕಾರ್ಯರು, ಅಂಗನವಾಡಿ ಕಾರ್ಯಕರ್ತರು ಸೇರಿ ಸುಮಾರು 8691 ಜನರಿಗೆ ಲಸಿಕೆಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಲಸಿಕೆ ಕೇಂದ್ರಗಳಲ್ಲಿ ಅಗತ್ಯ ಕೊಠಡಿ, ಸಿಬ್ಬಂದಿ, ತುರ್ತು ನಿಗಾ ಘಟಕ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹಾಗೂ ಮೊದಲ ಹಂತದಲ್ಲಿ ಡಿ ಗ್ರೂಪ್ ಸಿಬ್ಬಂದಿಗೆ ನೀಡಬೇಕು. ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ವ್ಯಾಕ್ಸಿನ್ ಪಡೆಯಲು ಐಡಿ ಕಾರ್ಡ್ ಕಡ್ಡಾಯವಾಗಿದೆ. ವ್ಯಾಕ್ಸಿನ್ ನೀಡಿಕೆ ನಂತರ 30 ನಿಮಿಷ್ ನಿಗಾ ಘಟಕದಲ್ಲಿ ಇರಿಸಬೇಕು. ಅಧಿಕಾರಿಗಳು ಸೇರಿದಂತೆ ಅಗತ್ಯ ಸಿಬ್ಬಂದಿಗಳು ಹಾಗೂ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಬೇಕು. ವಿದ್ಯುತ್ ವ್ಯತ್ಯವಾಗದಂತೆ ಕ್ರಮವಹಿಸಬೇಕು ಹಾಗೂ ಲಸಿಕೆ ನೀಡಿಕೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ ರೋಷನ್ ಅವರು ಮಾತನಾಡಿ, ಲಸಿಕಾ ಕೇಂದ್ರಗಳಲ್ಲಿ ಇಂಟರನೆಟ್ ಸ್ಥಗಿತಗೊಳ್ಳದಂತೆ ನಿಗಾವಹಿಸಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಕೋವಿಡ್ ಲಸಿಕೆಗೆ ಉಪಯೋಗಿಸಿದ ತ್ಯಾಜ್ಯವನ್ನು ಸರಿಯಾಗಿ ಶೇಖರಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಆರ್.ಸಿ.ಎಚ್. ಅಧಿಕಾರಿ ಡಾ.ಜಯಾನಂದ ಅವರು ಮಾತನಾಡಿ, 46 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಬ್ಯಾಡಗಿ ತಾಲೂಕಿನ ಬ್ಯಾಡಗಿ, ಕಾಗಿನೆಲೆ, ಕದರಮಂಡಲಗಿ,ಶಂಕ್ರಿಕೊಪ್ಪ ಹಾಗೂ ಚಿಕ್ಕಬ್ಬಾರ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಹಾನಗಲ್ ತಾಲೂಕಿನ ಹಾನಗಲ್, ಅಕ್ಕಿಆಲೂರು ಹಾಗೂ ಕುಸನೂರ ಆರೋಗ್ಯ ಕೇಂದ್ರಗಳಲ್ಲಿ ಜನವರಿ 16 ರಿಂದ 18ರವರೆಗೆ ಲಸಿಕೆ ಕಾರ್ಯಕ್ರಮ ನಡೆಯಲಿದೆ. ಹಾವೇರಿ ತಾಲೂಕಿನ ಹಾವೇರಿ, ಗುತ್ತಲ, ಅಗಡಿ, ದೇವಗಿರಿ, ಕರ್ಜಗಿ, ದೇವಿಹೊಸೂರು, ಹಾವನೂರು, ಕಾಟೇನಹಳ್ಳಿ, ಕುರುಬಗೊಂಡ, ಹಂದಿಗನೂರು, ಹೊಸರಿತ್ತಿ, ನೆಗಳೂರು ಹಾಗೂ ಕಬ್ಬೂರ ಆರೋಗ್ಯ ಕೇಂದ್ರಗಳಲ್ಲಿ ಜನವರಿ 16, ಜ.18, ಜ.19 ಹಾಗೂ 20ರವರೆಗೆ ನಡೆಯಲಿದೆ.
ಹಿರೇಕೆರೂರು ತಾಲೂಕಿನ ಹಿರೇಕೆರೂರು, ರಟ್ಟಿಹಳ್ಳಿ, ಮಾಸೂರು, ಕೋಡ, ಹೊಂಬರಡಿ, ಚಿಕ್ಕೇರೂರು, ತಡಕನಹಳ್ಳಿ ಹಾಗೂ ಕುಡಪಲಿ ಆರೋಗ್ಯ ಕೇಂದ್ರಗಳಲ್ಲಿ ಜನವರಿ 16 ರಿಂದ 18ರವರೆಗೆ ಹಾಗೂ ರಾಣೇಬೆನ್ನೂರು ತಾಲೂಕಿನ ರಾಣೇಬೆನ್ನೂರು, ಮೆಡ್ಲೇರಿ, ಹಲಗೇರಿ, ಸುಣಕಲ್ಲಬಿದರಿ, ಹೊನ್ನತ್ತಿ, ಮಾಕನೂರು ಆರೋಗ್ಯ ಕೇಂದ್ರಗಳಲ್ಲಿ ಜನವರಿ 18, ಜ.20 ಹಾಗೂ ಜ22 ರಂದು ನಡೆಯಲಿದೆ.
ಸವಣೂರ ತಾಲೂಕಿನ ಸವಣೂರು ಸಾರ್ವಜನಿಕ ಆಸ್ಪತ್ರೆ ಹಾಗೂ ಉಪ ಆರೋಗ್ಯ ಕೇಂದ್ರ ಮತ್ತು ಹತ್ತಿಮತ್ತೂರು ಕೇಂದ್ರದಲ್ಲಿ ಜನವರಿ 16 ರಿಂದ 18ರವರೆಗೆ, ನಡೆಯಲಿದೆ.
ಶಿಗ್ಗಾಂವ ತಾಲೂಕಿನ ಶಿಗ್ಗಾಂವ, ಬಂಕಾಪುರ, ತಡಸ, ದುಂಡಶಿ, ಅತ್ತಿಗೇರಿ ಆರೋಗ್ಯ ಕೇಂದ್ರಗಳಲ್ಲಿ ಜನವರಿ 16 ರಿಂದ 18ರವರೆಗೆ ಲಸಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ, ತಹಶೀಲ್ದಾರ ಶಂಕರ , ತಾಲೂಕಾ ಆರೋಗ್ಯಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.