ಕೋವಿಡ್ ಲಸಿಕೆ ಭಯಬೇಡ

ಲಕ್ಷ್ಮೇಶ್ವರ, ಜೂ 5: ಕೋವಿಡ್ ಲಸಿಕೆ ಪಡೆದ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ ಸುರಕ್ಷಿತವಾಗಿದ್ದು, ಗ್ರಾಮೀಣ ಭಾಗದ ಜನರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಲಸಿಕೆ ಪಡೆಯಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಆರ್.ವೈ. ಗುರಿಕಾರ ಅವರು ಹೇಳಿದರು.
ಲಸಿಕಾಕರಣ ಅಭಿಯಾನದ ಮೇಲ್ವಿಚಾರಣೆಗಾಗಿ ಶುಕ್ರವಾರ ದೊಡ್ಡೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಡೇನಹಳ್ಳಿ ಗ್ರಾಮ, ಯಳವತ್ತಿ, ಸೂರಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಭಿಯಾನದ ಕುರಿತು ಮೇಲ್ವಿಚಾರಣೆ ನಡೆಸಿ ಅವರು ಮಾತನಾಡಿದರು.
ಅಂಗವಿಕಲರು, 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈಗಾಗಲೇ ಎರಡು ಹಂತದ ಲಸಿಕೆ ಪಡೆದ ಸರ್ಕಾರಿ ನೌಕರರು ತೊಂದರೆ ಅನುಭವಿಸಿಲ್ಲ. ಸಾರ್ವಜನಿಕವಾಗಿ ಲಸಿಕೆ ನೀಡುವ ಮುನ್ನವೇ ಎಲ್ಲ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಪಡೆದುಕೊಂಡು ಸುರಕ್ಷಿತವಾಗಿದ್ದಾರೆ. ಲಸಿಕೆ ಪಡೆಯುವಂತೆ ಸ್ಥಳೀಯ ಜನಪ್ರತಿನಿಧಿಗಳು ಜಾಗೃತಿ ಮೂಡಿಸಬೇಕು. ಕೊರೊನಾ ಎರಡನೇ ಹಂತ ಗ್ರಾಮೀಣ ಭಾಗದಲ್ಲಿ ಹಲವು ಸಮಸ್ಯೆ ಸೃಷ್ಟಿಸಿದ್ದು ಗ್ರಾಮೀಣರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಉಚಿತವಾಗಿ ಲಸಿಕಾಕರಣ ಆರಂಭಿಸಿದ್ದು ಇದರ ಲಾಭ ಪಡೆಯಬೇಕು. ಮಹಾನಗರ, ನಗರ ಪ್ರದೇಶದಲ್ಲಿ ಲಸಿಕೆಗಾಗಿ ಸಾಲುಗಟ್ಟಿ ನಿಂತರು ಲಸಿಕೆ ಸಿಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಟಾಸ್ಕ್ ಫೆÇೀರ್ಸ್ ಸದಸ್ಯರು, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ವಾಲಿ, ಯಳವತ್ತಿ ಪಿಡಿಒ ಪ್ರವೀಣ ಗೋಣೆಮ್ಮನವರ, ಸೂರಣಗಿ ಪಿಡಿಒ ಸಂತೋಷಕುಮಾರ ಮೇಟಿ, ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಪಂಚಾಯಿತಿ ಕಾರ್ಯದರ್ಶಿ ಎಸ್.ಎಫ್. ಹಳ್ಯಾಳ, ಗ್ರಾಪಂ ಸಿಬ್ಬಂದಿ ಇತರರು ಇದ್ದರು.