ಕೋವಿಡ್ ಲಸಿಕೆ ಬಂದಿದೆ ಎಂದು ಮೈ ಮರೆಯಬಾರದು

ಮಂಗಳೂರು, ಮಾ.೨೫- ಕೊರೋನ ವೈರಾಣುವಿನಿಂದ ಹರಡುವ ಕೋವಿಡ್-೧೯ ಸೋಂಕು ಸಮುದಾಯದಲ್ಲಿ ಹೆಚ್ಚುತ್ತಲೇ ಇದೆ. ಎರಡನೇ ಅಲೆ ಮತ್ತಷ್ಟು ರೋಗಿಗಳನ್ನು ಕಾಡುತ್ತಿದೆ. ಲಸಿಕೆ ಬಂದಿದೆ ಎಂದು ಇನ್ನು ರೋಗ ಬರುವುದಿಲ್ಲವೆಂದು ಮೈ ಮರೆಯಬಾರದು ಎಂದು ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು ಎಚ್ಚರಿಕೆ ನೀಡಿದ್ದಾರೆ.
ನಗರದ ಪದವಿನಂಗಡಿಯಲ್ಲಿ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ತಂಡಗಳಿಂದ ಕೋವಿಡ್ ಜಾಗೃತಿ ಜಾಥಾ ಮತ್ತು ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸುರಕ್ಷಿತ ಅಂತರ, ಮುಖ ಕವಚ ಧರಿಸುವಿಕೆ, ಸ್ಯಾನಿಟೈಸರ್ ಮತ್ತು ಸಾಬೂನು ಬಳಕೆಯನ್ನು ಇನ್ನಷ್ಟು ದಿನಗಳ ಕಾಲ ಬಳಸುವುದು ಸೂಕ್ತವಾಗಿದೆ. ಇದರ ಮುಖಾಂತರವೇ ರೋಗವನ್ನು ನಿಯಂತ್ರಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಇನ್ನಷ್ಟು ಜಾಗೃತರಾಗಿ ವ್ಯವಹರಿಸಬೇಕಾಗಿದೆ ಎಂದರು. ಪದವಿನಂಗಡಿಯ ಎಲ್ಲ ಅಂಗಡಿಗಳಿಗೆ ತೆರಳಿ ಕೋವಿಡ್ ರೋಗದ ಲಕ್ಷಣಗಳು ಮತ್ತು ಕೋವಿಡ್ ರೋಗ ತಡೆಯುವಿಕೆ ಬಗ್ಗೆ ಮಾಹಿತಿ ಇರುವ ಕರಪತ್ರವನ್ನು ಎಲ್ಲರಿಗೂ ಹಂಚುವುದರೊಂದಿಗೆ ಎಲ್ಲರಿಗೂ ಮುಖ ಕವಚ ವನ್ನು ಕಡ್ಡಾಯವಾಗಿ ಧರಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಉಪ ಸಮಾದೇಷ್ಟ ರಮೇಶ್, ಕಚೇರಿಯ ಅಧೀಕ್ಷಕ ರತ್ನಾಕರ್ ಹಾಗೂ ವಿವಿಧ ಘಟಕಗಳ ಘಟಕಾಧಿಕಾರಿಗಳು ಉಪಸ್ಥಿತರಿದ್ದರು.