ಕೋವಿಡ್ ಲಸಿಕೆ ಪ್ರಕ್ರಿಯೆ: ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ರಾಯಚೂರು, ಜೂ.೫-ನಗರದ ಆಶಾಪುರ ರಸ್ತೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಭೇಟಿ ನೀಡಿ ಅಲ್ಲಿ ಕೋವಿಡ್ ವ್ಯಾಕ್ಸಿನ್ ನೀಡುತ್ತಿರುವ ಪ್ರಕ್ರಿಯೆಯನ್ನು ಪರಿಶೀಲಿಸಿದರು.
ಇದೇ ಜೂ.೪ರಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕ ಆಸ್ಪತ್ರೆಗಳು ಹಾಗೂ ರಿಮ್ಸ್‌ನಲ್ಲಿ ೪೫ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ಲಸಿಕೆಯನ್ನು ನೀಡಲಾಗುತ್ತಿದೆ, ಅದನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು ವ್ಯಾಕ್ಸಿನ್ ಪಡೆದವರು ಕಡ್ಡಾಯವಾಗಿ ಅರ್ಧಗಂಟೆ ನಿಗಾದಲ್ಲಿರಬೇಕು, ಆರೋಗ್ಯ ಕೇಂದ್ರದ ಆವರಣದಲ್ಲಿಯೇ ಖುರ್ಚಿಯಲ್ಲಿ ಕುಳ್ಳಿರಿಸರಬೇಕು, ನಂತರವೇ ಅವರನ್ನು ಕಳುಹಿಸಬೇಕು, ಲಸಿಕೆ ಪಡೆಯಲು ಬಂದ ಸಾರ್ವಜನಿಕರು ಗುಂಪಾಗಿ ಸೇರದೆ, ಸಾಮಾಜಿಕ ಅಂತರವನ್ನು ಕಾಪಾಡಬೇಕು ಎಂದರು.
ಲಸಿಕೆ ಪಡೆಯಲು ಬಂದವರನ್ನು ಪರಸ್ಪರ ಅಂತರದಲ್ಲಿ ಖುರ್ಚಿ ಹಾಕಿ ಕುಳ್ಳಿರಿಸಬೇಕು, ಅದರ ವ್ಯವಸ್ಥೆ ಮಾಡುವಂತೆ ಆರೋಗ್ಯ ಕೇಂದ್ರದ ಮುಖ್ಯಸ್ಥರಿಗೆ ಸೂಚಿಸಿದ ಜಿಲ್ಲಾಧಿಕಾರಿಯವರು, ಲಸಿಕೆ ಪಡೆಯಲು ಬಂದವರ ನೋಂದಣಿ ಪ್ರಕ್ರಿಯೆನ್ನು ಸಮಪರ್ಕವಾಗಿ ನಿರ್ವಹಿಸಬೇಕು, ಪಾರದರ್ಶಕವಾಗಿರಬೇಕು, ಅದರಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದ ನೀಡಬಾರದು, ಕೋವಿಡ್ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಆದ್ಯತೆಗನುಸಾರ ಇದೀಗ ವ್ಯಾಕ್ಸಿನ ನೀಡಲಾಗುತ್ತಿದ್ದು, ಫಲಾನುಭವಿಗಳು ಲಸಿಕೆ ಪಡೆದುಕೊಂಡು ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ವಿಜಯ, ತಾಲೂಕು ಆರೋಗ್ಯಾಧಿಕಾರಿ ಡಾ. ಶಾಕೀರ್ ಸೇರಿದಂತೆ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿಗಳಿದ್ದರು.
ಲಸಿಕೆ ಪಡೆಯಲು ಕೋರಿಕೆ:
ಇದೇ ಜೂ.೪ರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ (ರಿಮ್ಸ್ ಆಸ್ಪತ್ರೆ, ತಾಲೂಕ ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಇದೂವರೆಗೆ ಕೋವಿಡ್-೧೯ ಲಸಿಕೆ ಪಡೆಯದೆ ಇರುವ ೪೫-೫೯ ವರ್ಷ ಮೇಲ್ಪಟ್ಟ ಹಾಗೂ ೬೦ ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡುವ ಅವಕಾಶ ಕಲ್ಪಿಸಿಕೊಡಲಾಗಿದೆ ಹಾಗೂ ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದ ಲಸಿಕೆಯು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಡಳಿತ ಪ್ರಕಟಣೆಯಲ್ಲಿ ಕೋರಿದೆ.
ಈಗಾಗಲೇ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕೊವೀಶೀಲ್ಡ್‌ನ ಮೊದಲನೆ ಲಸಿಕೆ ಪಡೆದಂತಹ ಫಲಾನುಭವಿಗಳು ೧೨ ರಿಂದ ೧೬ ವಾರದೊಳಗೆ ಮತ್ತೊಂದು ಲಸಿಕೆ ಪಡೆದುಕೊಳ್ಳಬೇಕು, ಇದೆ ರೀತಿಯಾಗಿ ಕೊವ್ಯಾಕ್ಸಿನ್ ಮೊದಲನೆಯ ಲಸಿಕೆಯನ್ನು ಪಡೆದಂತಹ ಫಲಾನುಭವಿಗಳು ತಮ್ಮ ಎರಡನೆಯ ಲಸಿಕೆಯನ್ನು ೪ ರಿಂದ ೮ ವಾರದೊಳಗೆ ಕಡ್ಡಾಯವಾಗಿ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಪಡೆಯುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.