ಕೋವಿಡ್ ಲಸಿಕೆ ಪಡೆಯವುದರಿಂದ ಅಡ್ಡಪರಿಣಾಮವಿಲ್ಲ-ವದಂತಿಗಳಿಗೆ ಕಿವಿಗೊಡದಿರಿ

ವಿಜಯಪುರ, ಏ.23-ಕೋವಿಡ್-19 ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ ಈ ಕುರಿತು ಸುಳ್ಳುವದಂತಿಗಳಿಗೆ ಕಿವಿಗೊಡದಿರಲು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಕರೆ ನೀಡಿದ್ದಾರೆ.
ನಗರದ ಗಾಂಧಿಚೌಕ್ ಹತ್ತಿರದ ಸರ್ಕಾರಿ ಬಾಲಕಿಯರ ಕಾಲೇಜ್ ಆವರಣದಲ್ಲಿಂದು ಶಿಕ್ಷಣ ಇಲಾಖೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ದೇಶಿಯ ಲಸಿಕೆಗಳಾಗಿರುವುದರಿಂದ ಎಲ್ಲರೂ ಅಭಿಮಾನ ಪಡುವಂತಹ ವಿಷಯವಾಗಿದ್ದು, ಯಾವುದೇ ವದಂತಿಗಳಿಗೆ ಗಮನ ನೀಡದೆ ತಮ್ಮ ಸುರಕ್ಷತೆಗಾಗಿ ಈ ಲಸಿಕೆಗಳನ್ನು ಪಡೆಯುವಂತೆ ಅವರು ಸಲಹೆ ನೀಡಿದರು.
ಈಗಾಗಲೇ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಈ ಲಸಿಕೆಗಳನ್ನು ಪಡೆದಿದ್ದು, ಶಿಕ್ಷಕರಿಗೂ ಸಾಮೂಹಿಕ ಲಸಿಕಾ ಕಾರ್ಯಕ್ರಮ ಆಯೋಜಿಸುವ ಮೂಲಕ ಕರ್ತವ್ಯ ಪ್ರಜ್ಞೆ ನಿಭಾಯಿಸಿದ್ದಾರೆ. ಇದಕ್ಕಾಗಿ ಮತ್ತು ಈ ಶಿಬಿರ ಏರ್ಪಡಿಸಲು ಕಾರಣೀಭೂತರಾದ ಶಾಸಕ ಅರುಣ ಶಹಾಪೂರ ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿಶ್ವ ಮತ್ತು ರಾಷ್ಟ್ರದಲ್ಲಿ ಕಳೆದ ವರ್ಷ ಬಂದಿದ್ದ ಕೊರೋನಾ ವೈರಸ್ ನಂತರ ಕರ್ನಾಟಕದಲ್ಲಿ ವ್ಯಾಪಿಸಿದೆ. ಕೋವಿಡ್ ಪರಿಸ್ಥಿತಿಯ ಸಮರ್ಪಕ ನಿರ್ವಹಣೆಗೆ ಮಾನ್ಯ ಪ್ರಧಾನಿಗಳು, ಮುಖ್ಯಮಂತ್ರಿಗಳು ಅವಿರತ ಶ್ರಮಿಸುತ್ತಿದ್ದು, ದೇಶಿಯ ಲಸಿಕೆಗಳ ಮೂಲಕ ಇದರ ನಿಯಂತ್ರಣಕ್ಕೆ ಪ್ರಯತ್ನಗಳು ನಡೆದಿವೆ. ರೂಪಾಂತರ ವೈರಸ್ ಇದಾಗಿದ್ದು, ಈ ಮುಂಚೆಗಿಂತಲೂ ಅಧಿಕ ಅಪಾಯಕಾರಿ ಇದಾಗಿದ್ದು, 20 ವರ್ಷ ಮೇಲ್ಪಟ್ಟ ಯುವಕರಿಗೂ ಈ ವೈರಸ್ ಅಪಾಯ ಒಡ್ಡುತ್ತಿದೆ. ಕಾರಣ ಎಲ್ಲರೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ತಮ್ಮ ರಕ್ಷಣೆಗೆ ಗಮನ ನೀಡಲು ಅವರು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಅವರು ಮಾತನಾಡಿ ಜಿಲ್ಲೆಯ ಪ.ಪೂ ಕಾಲೇಜ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಶಿಕ್ಷಕರಿಗೆ ಈ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು. ಪ್ರತಿ ತಾಲೂಕಿನಲ್ಲಿ ಇಂತಹ ಶಿಬಿರ ಆಯೋಜಿಸಿ ಕೋವಿಡ್-19 ಲಸಿಕೆ ಹಾಕಿಸಬೇಕು. ಇಂದು ಏರ್ಪಡಿಸಲಾದ ಈ ಲಸಿಕಾ ಶಿಬಿರವು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಹೇಳಿ ಶಿಕ್ಷಕರು ಕೋವಿನ್ ಆಪ್‍ನ ರಾಯಬಾರಿಗಳಾಗಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ಹೊಸೂರ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಕುಮಾರ ಯರಗಲ್, ಸರ್ಜನ್ ಶರಣಪ್ಪ ಕಟ್ಟಿ, ಪ.ಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀ ದಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ ಹಾಗೂ ಇತರರು ಉಪಸ್ಥಿತರಿದ್ದರು.