ಕೋವಿಡ್ ಲಸಿಕೆ ಪಡೆಯಲು ಹಿಂಜರಿಕೆ ಬೇಡ

ಅರಸೀಕೆರೆ, ಮಾ. ೨೭- ಜನರನ್ನು ಕಾಡಿದ್ದ ಕೊರೊನಾ ನಿಯಂತ್ರಣಕ್ಕೆ ವ್ಯಾಕ್ಸಿನ್ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಸಾರ್ವಜನಿಕರು ಧೈರ್ಯವಾಗಿ ಲಸಿಕೆ ಪಡೆಯಬಹುದು ಎಂದು ಸತೀಶ್ ಶರ್ಮ ಗುರೂಜಿ ಹೇಳಿದರು.
ನಗರದ ಸರ್ಕಾರಿ ಜೆಸಿ ಆಸ್ಪತ್ರೆಗೆ ಸ್ವಯಂ ಪ್ರೇರಿತವಾಗಿ ಆಗಮಿಸಿದ ಗುರೂಜಿಗಳು ಕೊರೊನಾ ಲಸಿಕೆ ಪಡೆದ ನಂತರ ಮಾತನಾಡಿ, ಸಮಾಜದಲ್ಲಿ ಆಧ್ಯಾತ್ಮಿಕ ಚಿಂತನೆಗಳು ದೂರವಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಕಾರಣ ಅನೇಕ ಸಮಸ್ಯೆಗಳು ಜೀವಸಂಕುಲಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ ಎಂದರು.
ಸರ್ಕಾರಿ ಜೆಸಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಷಡಕ್ಷರಿ ಮಾತನಾಡಿ, ವಿಶ್ವದ ಬಹುತೇಕ ರಾಷ್ಟ್ರಗಳನ್ನು ಕಾಡಿದ ಕೋವಿಡ್ ಸೋಂಕು ಭಾರತದ ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ಭಾರತೀಯ ವಿಜ್ಞಾನಿಗಳ ಸಂಶೋಧನೆಯ ಪರಿಶ್ರಮ ಹಾಗೂ ಕೇಂದ್ರ ಸರ್ಕಾರದ ಸಹಕಾರದಲ್ಲಿ ದೇಶಿಯ ಲಸಿಕೆ ಕಂಡು ಹಿಡಿದಿದ್ದು ಕೊರೊನಾ ವಾರಿಯರ್ಸ್‌ಗಳಿಗೆ ೨ ಹಂತಗಳಲ್ಲಿ ವ್ಯಾಕ್ಸಿನ್ ನೀಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ಶೈಲೇಂದ್ರಕುಮಾರ್, ಸರ್ಕಾರಿ ಜೆಸಿ ಆಸ್ಪತ್ರೆಯ ರಕ್ಷಾ ಸಮಿತಿ ಸದಸ್ಯ ಎಂ. ವೈ. ಖಾನ್ ಉಪಸ್ಥಿತರಿದ್ದರು.