ಕೋವಿಡ್ ಲಸಿಕೆ ಪಡೆಯಲು ಜಿಲ್ಲಾಧಿಕಾರಿ ಸೂಚನೆ

ಕಲಬುರಗಿ,ಜೂ.02:ಜಿಲ್ಲೆಯ 18 ರಿಂದ 44 ವರ್ಷ ವಯೋಮಾನದವರಿಗೆ (ಸರ್ಕಾರ ಗುರುತಿಸಿದ ಆದ್ಯತೆ ಗುಂಪುಗಳಿಗೆ) ಆದ್ಯತೆ ಮೇರೆಗೆ ಇದೇ ಜೂನ್ 3 ರಿಂದ ಜಿಲ್ಲೆಯ ಎಲ್ಲಾ ತಾಲೂಕಿನ ತಾಲೂಕಾ ಸಾರ್ವಜನಿಕ ಆಸ್ಪತ್ರೆ, ಎಲ್ಲಾ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಕಲಬುರಗಿ ನಗರದ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ಅದರಂತೆ 45 ವರ್ಷ ಮೇಲ್ಪಟ್ಟವರಿಗೆ ಎಲ್ಲಾ ತಾಲೂಕಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಜಿಲ್ಲೆಯ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ಕಲಬುರಗಿ ನಗರದ ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇ.ಎಸ್.ಐ.ಸಿ. (ESIC) ಆಸ್ಪತ್ರೆ ಹಾಗೂ ಕಲಬುರಗಿ ನಗರದ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ನೀಡಲಾಗುತ್ತಿದೆ.
ಕೋವ್ಯಾಕ್ಸಿನ್ ಎರಡನೇ ಡೋಸ್‍ನ್ನು (Covaxin 2nd Dose) ಕಲಬುರಗಿ ನಗರದ ಜಿಮ್ಸ ವೈದ್ಯಕೀಯ ಮಹಾವಿದ್ಯಾಲಯ, ಇ.ಎಸ್.ಐ.ಸಿ. (ESIC) ಆಸ್ಪತ್ರೆ, ನಗರದ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಎಲ್ಲಾ ತಾಲೂಕಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ತಿಳಿಸಿದ್ದಾರೆ.