ಕೋವಿಡ್ ಲಸಿಕೆ ನೋಂದಣಿ ಅಭಿಯಾನ

ಅರಸೀಕೆರೆ, ಮಾ. ೨೩- ಕೋವಿಡ್-೧೯ ಲಸಿಕೆ ಪಡೆಯುವುದರಿಂದ ಯಾವುದೇ ಪರಿಣಾಮ ನಮ್ಮ ಆರೋಗ್ಯದ ಮೇಲೆ ಉಂಟಾಗುವುದಿಲ್ಲ. ಸಾರ್ವಜನಿಕರು ಕೋವಿಡ್-೧೯ ಲಸಿಕೆಯನ್ನು ಧೈರ್ಯವಾಗಿ ಪಡೆಯಬಹುದು ಎಂದು ಪುರುಷೋತ್ತಮ್ ಹೇಳಿದರು.
ನಗರದ ಪಿ.ಪಿ. ವೃತ್ತದಲ್ಲಿ ಏರ್ಪಡಿಸಿದ್ದ ಕೋವಿಡ್-೧೯ ಲಸಿಕೆ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ೪೫ ವರ್ಷ ಮೇಲ್ಪಟ್ಟವರು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಇರುವವರು ವೈದ್ಯರ ಸಲಹೆ ಮೇರೆಗೆ ವ್ಯಾಕ್ಸಿನ್ ಲಸಿಕೆ ಪಡೆದುಕೊಳ್ಳಬಹುದು. ೬೦ ವರ್ಷ ಮೇಲ್ಪಟ್ಟವರಿಗೆ ಯಾವುದೇ ತರದ ನಿರ್ಬಂಧ ಇಲ್ಲ. ಪ್ರತಿಯೊಬ್ಬರೂ ಇದರ ಉಪಯೋಗವನ್ನು ಪಡೆದುಕೊಳ್ಳಿ ಎಂದರು.
ವಿಶ್ವದ ಅನೇಕ ರಾಷ್ಟ್ರಗಳನ್ನು ಕಾಡಿದ ಕೋವಿಡ್-೧೯ ಸೋಂಕು ಭಾರತದ ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ನಮ್ಮ ವಿಜ್ಞಾನಿಗಳ ಸತತ ಪರಿಶ್ರಮ ಹಾಗೂ ಕೇಂದ್ರ ಸರ್ಕಾರದ ಸಹಕಾರದಲ್ಲಿ ದೇಶಿಯ ಲಸಿಕೆ ಕಂಡು ಹಿಡಿದಿದ್ದು, ಪ್ರಾರಂಭದ ಹಂತದಲ್ಲಿ ವಾರಿಯರ್ಸ್‌ಗಳಿಗೆ ಹಂತ, ಹಂತವಾಗಿ ಲಸಿಕೆ ನೀಡಲಾಗಿದ್ದು, ಯಾವುದೇ ರೀತಿಯ ಅಡ್ಡಪರಿಣಾಮಗಳು ಯಾರಿಗೂ ಉಂಟಾಗಿಲ್ಲ. ಪ್ರಸ್ತುತ ೬೦ ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಲಸಿಕೆ ಪಡೆಯುವುದು ಸೂಕ್ತ ಎಂದು ಹೇಳಿದರು.
ತೆಂಗು ನಾರು ನಿಗಮದ ಸದಸ್ಯ ಬಾಣಾವಾರ ಬಿ.ಆರ್. ಜಯಣ್ಣ ಮಾತನಾಡಿ, ಹಿರಿಯ ನಾಗರಿಕರು ಕಡ್ಡಾಯವಾಗಿ ಕೋವಿಡ್-೧೯ ಲಸಿಕೆ ಪಡೆಯುವುದರಿಂದ ಎರಡನೇ ಅಲೆಯ ಕೊರೊನಾ ನಿಯಂತ್ರಿಸಲು ಸಾಧ್ಯ. ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ನೋಂದಣಿ ಮಾಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುತ್ತಿರುವ ಕೋವಿಡ್-೧೯ ಲಸಿಕೆ ಪಡೆದುಕೊಳ್ಳುವ ಮೂಲಕ ಕೊರೊನಾ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಉಪಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಅವಿನಾಶ್ ನಾಯ್ಡು, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ್, ಎಸ್ಸಿ ಮೋರ್ಚಾ ಅಧ್ಯಕ್ಷ ವಿಜಯಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಚಂದ್ರು, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.