ಕೋವಿಡ್ ಲಸಿಕೆ ನೀಡಿಕೆ ಕಾರ್ಯ ಯುದ್ಧೋಪಾದಿಯಲ್ಲಿ ನಡೆಯಲಿ: ಡಿ.ಸಿ

ಬೀದರ.ಮಾ.27: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಬೀದರ ಜಿಲ್ಲೆಯಲ್ಲಿ ಕೂಡ ಕೋವಿಡ್-19 ಲಸಿಕೆ ನೀಡುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ನಡೆಸೋಣ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ರಾಜ್ಯದಲ್ಲಿನ ಕೋವಿಡ್-19 ಸ್ಥಿತಿಗತಿ ಪರಿಶೀಲನೆಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನಡೆಸಿದ ವಿಡಿಯೋ ಸಂವಾದ ಬಳಿಕ ಜಿಲ್ಲಾಧಿಕಾರಿಗಳು, ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರದಿಂದ ಲಿಖಿತ ಸೂಚನೆಯಿದೆ. ಆರೋಗ್ಯ ಕಾರ್ಯಕರ್ತರು ಮತ್ತು ವಿವಿಧ ಇಲಾಖೆಗಳ ಮುಖ್ಯವಾಹಿನಿಯ ಕಾರ್ಯಕರ್ತರಿಗೆ ಬಾಕಿ ಇರುವ ಲಸೀಕಾಕರಣವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಮತ್ತು ಇನ್ನೀತರ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್-19 ಪಾಜಿಟಿವಿಟಿ ರೇಟ್ ಕಡಿಮೆಯಾಗುವವರೆಗೆ ಕೋವಿಡ್-19 ನಿಯಂತ್ರಣ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಕೊಳ್ಳಲು ಅನುಕೂಲವಾಗುವಂತೆ ಮನೆಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಲು ಅಂಗನವಾಡಿ, ಆಶಾ ಕಾರ್ಯಕರ್ತರು, ಪಿಡಿಓ, ಶಿಕ್ಷಕರ ಸಹಕಾರ ಪಡೆದು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆ ಸಲಹೆ ಮಾಡಿದರು.
ವಿಡಿಯೋ ಸಂವಾದದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಡಿಎಚ್‍ಓ ಡಾ.ವಿ.ಜಿ.ರೆಡ್ಡಿ ಮತ್ತು ಇನ್ನೀತರೆ ವೈದ್ಯಾಧಿಕಾರಿಗಳು ಇದ್ದರು.