ಕೋವಿಡ್ ಲಸಿಕೆ ನೀಡಿಕೆಗೆ ಕ್ಯಾಂಪ್ ಆಯೋಜಿಸಿ:ಪಿ.ರವಿಕುಮಾರ

ಕಲಬುರಗಿ:ಮಾ.30:ಕಲಬುರಗಿ ಜಿಲ್ಲೆಯಲ್ಲಿ ಕಳೆದ 15 ದಿನದಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಕೋವಿಡ್ ಲಸಿಕೆ ನೀಡುವತ್ತ ಹೆಚ್ಚು ಗಮನಹರಿಸಬೇಕು. ಅಗತ್ಯವಿದ್ದರೆ ಕ್ಯಾಂಪ್ ಆಯೋಜಿಸಿ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಕೋವಿಡ್-19 ಸ್ಥಿತಿಗತಿ ಕುರಿತು ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 16337 ಆರೋಗ್ಯ ಕಾರ್ಯಕರ್ತರು ಮತ್ತು 7787 ಮುಂಚೂಣಿ ಕಾರ್ಯಕರ್ತರು ಪ್ರಥಮ ಡೋಸ್ ಪಡೆದರೆ ಎರಡನೇ ಡೋಸ್ ಪಡೆದವರ ಸಂಖ್ಯೆ ಕ್ರಮವಾಗಿ 9531 ಮತ್ತು 2927 ಇದೆ. ಎರಡನೇ ಡೋಸ್ ಪಡೆಯಲು ನಿರಾಸಕ್ತಿ ಕುರಿತು ಪ್ರಶ್ನಿಸಿದ ಅವರು ಎರಡನೇ ಡೋಸ್ ಹಾಕಿಸಿಕೊಳ್ಳದವರಿಗೆ ಕೂಡಲೆ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ಕೊಡಬೇಕು ಎಂದ ಅವರು ಕೋವಿಡ್ ಲಸಿಕೆ ಪಡೆಯಲು ಪ್ರೇರೇಪಿಸಿ ಎಂದರು.
ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ ಉಲ್ಬಣಗೊಂಡಲ್ಲಿ ಇದರ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಬೇಕು ಎಂದ ಅವರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇರುವ ವೆಂಟಿಲೇಟರ್ ಮತ್ತು ಬೆಡ್‍ಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.
ಸೋಂಕು ನಿಯಂತ್ರಣಕ್ಕೆ ತಪಾಸಣೆ, ಸೋಂಕಿತರ ಸಂಪರ್ಕಕ್ಕೆ ಬಂದ ಸಂಪರ್ಕಿತರ ಪತ್ತೆ ಕಾರ್ಯಾಚರಣೆ ಮತ್ತು ಐಸೋಲೇಟ್ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದ ಅವರು ಕಳೆದ ವರ್ಷ ಕೋವಿಡ್ ಸೋಂಕು ಕಂಡುಬಂದ ನಂತರ ಗ್ರಾಮೀಣ ಪ್ರದೇಶದಲ್ಲಿ ಜನಪ್ರತಿನಿಧಿಗಳು ಒಳಗೊಂಡಂತೆ ಟಾಸ್ಕ್ ಫೋರ್ಸ್ ರಚಿಸಿ ಜಾಗೃತಿ ಮೂಡಿಸಿದ್ದು ಫಲಪ್ರದವಾಗಿದ್ದು, ಇದನ್ನು ಮತ್ತೆ ರಚಿಸಿ ಕಾರ್ಯಗತಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ. ದಿಲೀಶ್ ಸಾಸಿ ಅವರಿಗೆ ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದರು.
ಕಳೆದ ವರ್ಷ ಕೋವಿಡ್ ಸೋಂಕು ಕಂಡುಕೂಡಲೆ ಇಡೀ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಘೋಷಿಸುವ ಸಂಭವ ಕಡಿಮೆ. ಈಗಾಗಲೆ ಕೋವಿಡ್ ಲಸಿಕೆ ಸಹ ದೊರೆತಿರುವುದರಿಂದ ಎಲ್ಲಾ ಅರ್ಹರಿಗೂ ಕೋವಿಡ್ ಲಸಿಕೆ ನೀಡುವತ್ತ ಹೆಚ್ಚ ಗಮನಹರಿಸುವುದೇ ಅವಶ್ಯಕವಾಗಿದೆ ಎಂದರು.
ಮಹಾರಾಷ್ಟ್ರದ ಗÀಡಿಗೆ ಜಿಲ್ಲೆ ಹೊಂದಿಕೊಂಡಿದ್ದರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು. ಗಡಿ ಗ್ರಾಮದ ಗ್ರಾಮಸ್ಥರು ನೆರೆಯ ರಾಜ್ಯದ ಗಡಿಗೆ ದಿನ ಓಡಾಡುವರು ಇರುತ್ತಾರೆ. ಇಂತಹ ಸಂದರ್ಭದಲ್ಲಿ ಗಡಿ ಗ್ರಾಮದಲ್ಲಿ ರ್ಯಾಂಡಮ್ ತಪಾಸಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿದರು.
ಜಾಗೃತಿ ನಿರಂತರವಾಗಿರಲಿ: ಕೊರೋನಾದೊಂದಿಗೆ ಬದುಕು ಸಾಗಿಸುವುದು ಅನಿವಾರ್ಯವಾಗಿದ್ದು, ಕೋವಿಡ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪರಿಪಾಲನೆ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರ ಸಾಗಲಿ ಎಂದರು.
ಜಾತ್ರೆ ನಡೆಸಿದರೆ ಕೇಸ್ ಹಾಕಿ: ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜಾತ್ರಾ, ಉರುಸ್, ಮೆರವಣಿಗೆ ನಡೆಸÀದಂತೆ ನಿರ್ಬಂಧಿಸಬೇಕು. ಇದಕ್ಕೂ ಮೀರಿ ಆಯೋಜಿಸಿದಲ್ಲಿ ಆಯೋಜಕರ ವಿರುದ್ಧ ಕೇಸ್ ಹಾಕಿ ಎಂದು ಖಡಕ್ ಸೂಚನೆ ನೀಡಿದರು.
ಗೃಹ ಬಂಧನದಲ್ಲಿದ್ದವರಿಗೆ ಹ್ಯಾಂಡ್ ಸ್ಟ್ಯಾಂಪ್: ಗೃಹ ಬಂಧನದಲ್ಲಿರುವ ಕೊರೋನಾ ಪಾಸಿಟಿವ್ ವ್ಯಕ್ತಿಗಳು ಮನೆಯಿಂದ ಹೊರಗಡೆ ತಿರುಗಾಡಿದರೆ ಹ್ಯಾಂಡ್ ಸ್ಟ್ಯಾಂಕ್ ಹಾಕಿ ಹೊರಗಡೆ ತಿರುಗದಂತೆ ಎಚ್ಚರ ನೀಡಬೇಕು. ಇದಕ್ಕೂ ಕೇಳದಿದ್ದರೆ ಕೇಸ್ ಹಾಕಿ ಎಂದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ, ಜಿಲ್ಲೆಯಲ್ಲಿ ಫೆಬ್ರವರಿ-2021ರ ಮೊದಲನೇ ವಾರದಲ್ಲಿ ಶೇ.1.09 ರಷ್ಟು ಕೋವಿಡ್ ಪಾಸಿಟಿವಿಟಿ ಪ್ರಮಾಣವಿದ್ದರೆ ಮಾರ್ಚ್-2021ರ ನಾಲ್ಕನೇ ವಾರದಲ್ಲಿ ಇದರ ಪ್ರಮಾಣ ಶೇ.2.2ಕ್ಕೆ ಹೆಚ್ಚಳಗೊಂಡಿದೆ. ಕಳೆದ ಒಂದು ವಾರದಲ್ಲಿ 805 ಕೋವಿಡ್ ಪಾಸಿಟಿವ್ ವರದಿಯಾಗಿದ್ದು, ಇದರಲ್ಲಿ ಕಲಬುರಗಿ ನಗರದಲ್ಲಿಯೆ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ ಗುರಿ 2000 ಇದ್ರೂ 5000 ಸ್ಯಾಂಪಲ್ಸ್‍ಗಳನ್ನು ಪಡೆದು ತಪಾಸಣೆ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದ 25 ರಿಂದ 30 ಜನರನ್ನು ಪತ್ತೆ ಹಚ್ಚಿ ಅವರನ್ನು ಸಹ ತಪಾಸಣೆಗೆ ಒಳಪಡಿಸುತ್ತಿದ್ದೇವೆ. ಎರಡನೇ ಅಲೆಯಲ್ಲಿ ಯಾವುದೇ ಪ್ರಯಾಣದ ಇತಿಹಾಸ ಕಂಡುಬರುತ್ತಿಲ್ಲ ಎಂದರು.

ಜಿಲ್ಲೆಯಾದ್ಯಂತ ಮಾಸ್ಕ್ ಧರಿಸುವಿಕೆ ಮತು ಸಾಮಾಜಿಕ ಅಂತರ ಪರಿಪಾಲನೆಗೆ ಜಾಗೃತಿ ಕಾರ್ಯಕ್ರಮಗಳು ನಿರಂತರ ಸಾಗಿದ್ದು, ಕಳೆದ ಒಂದು ವಾರದಲ್ಲಿ ಮಾಸ್ಕ್ ಧರಿಸದ 4562 ಜನರಿಗೆ 6.08 ಲಕ್ಷ ರೂ. ದಂಡ ವಿಧಿಸಲಾಗಿದೆ. ಕೋವಿಡ್ 2ನೇ ಅಲೆ ಉಲ್ಬಣಗೊಂಡಲ್ಲಿ ಇದರ ನಿಯಂತ್ರಣಕ್ಕೆ ಕೋವಿಡ್ ಕೇರ್ ಸೆಂಟರ್ ತೆರೆಯಲು ವಸತಿ ನಿಲಯಗಳನ್ನು ಗುರುತಿಸಿದೆ ಎಂದ ಅವರು ಜಿಲ್ಲೆಗೆ ಆಕ್ಸಿಜನ್ ಸ್ಟೋರೇಜ್ ಪ್ಲ್ಯಾಂಟ್ ಅವಶ್ಯಕತೆ ಇದೆ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದರು.

ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ಅವರು ಮಾತನಾಡಿ 41 ಖಾಸಗಿ ಸೇರಿದಂತೆ ಜಿಲ್ಲೆಯಲ್ಲಿ 131 ವೆಂಟಿಲೇಟರ್ ಇದ್ದು, ಒಟ್ಟಾರೆ 528 ಕೋವಿಡ್ ಬೆಡ್ ಎಂದು ಗುರುತಿಸಲಾಗಿದೆ. ಸೋಂಕು ಉಲ್ಭಣಿಸಿದಲ್ಲಿ ಅಗತ್ಯ ಮಾನವ ಸಂಪನ್ಮೂಲ ಪಡೆಯಲು ಸಹ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದರು.

ಜಿಲ್ಲಾ ಆರ್.ಸಿ.ಹೆಚ್.ಓ ಡಾ.ಪ್ರಭುಲಿಂಗ ಮಾನಕರ್ ಅವರು ಮಾತನಾಡಿ ಸೋಮವಾರವೇ ಜಿಲ್ಲೆಗೆ 30 ಸಾವಿರ ಕೋವಿಶೀಲ್ಡ್ ಡೋಸ್ ಲಸಿಕೆ ಬಂದಿದ್ದು, ಜಿಲ್ಲೆಯಲ್ಲಿ ಲಸಿಕೆಗೆ ಕೊರತೆಯಿಲ್ಲ. ಇದಕ್ಕೂ ಮೊದಲು ಜಿಲ್ಲೆಗೆ 90,510 ಕೋವಿಶೀಲ್ಡ್ ಮತ್ತು 11,200 ಕೋವ್ಯಾಕ್ಸಿನ್ ಡೋಸ್ ಲಸಿಕೆ ಬಂದಿದ್ದು, ಕ್ರಮವಾಗಿ 77,291 ಮತ್ತು 9,132 ಬಳಕೆಯಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಆರೋಗ್ಯ, ಮುಂಚೂಣಿ ಕಾರ್ಯಕರ್ತರು, 45-60 ಮತ್ತು 60 ಮೇಲ್ಪಟ್ಟ ನಾಗರಿಕರು ಒಳಗೊಂಡಂತೆ 73,485 ಜನರಿಗೆ ಮೊದಲನೇ ಡೋಸ್ ಮತ್ತು 12,458 ಜನರಿಗೆ ಎರಡನೇ ಡೋಸ್ ನೀಡಲಾಗಿದೆ ಎಂದರು.
ಸಭೆಯಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ, ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್. ಸತೀಷಕುಮಾರ, ಎಸ್.ಪಿ. ಡಾ.ಸಿಮಿ ಮರಿಯಮ್ ಜಾರ್ಜ್, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ, ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ವೈದ್ಯಕೀಯ ಅಧೀಕ್ಷಕ ಡಾ.ಶಫಿಯೂದ್ದಿನ್ ಸೇರಿದಂತೆ ತಾಲೂಕಿನ ತಹಶೀಲ್ದಾರರು, ಆರೋಗ್ಯಾಧಿಕಾರಿಗಳು ಇದ್ದರು.