ಕೋವಿಡ್ ಲಸಿಕೆ: ಜಿಲ್ಲೆಯಲ್ಲಿ ಎರಡನೇ ಹಂತದ ಡ್ರೈರನ್

ಕಲಬುರಗಿ,ಜ.8-ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಲಸಿಕೆ ನೀಡುವ ಎರಡನೇ ಹಂತದ ಅಣಕು ಕಾರ್ಯಾಚರಣೆ (ಡ್ರೈರನ್)ಯನ್ನು ಜಿಲ್ಲೆಯ ಆಯ್ದ ಆರು ಕೇಂದ್ರಗಳಲ್ಲಿ ಇಂದು ನಡೆಸಲಾಗಿದೆ.
ನಗರದ ಜಿಮ್ಸ್ ಕಾಲೇಜ್, ಎಂ.ಆರ್.ಮೆಡಿಕಲ್ ಕಾಲೇಜ್, ಶಿವಾಜಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸೇಡಂ ತಾಲ್ಲೂಕ ಆಸ್ಪತ್ರೆ, ರಟಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಚಿತ್ತಾಪುರ ತಾಲ್ಲೂಕಿನ ಹೆಬ್ಬಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿಂದು ಕೋವಿಡ್-19 ಲಸಿಕೆಯ ಡ್ರೈರನ್ ನಡೆಸಲಾಯಿತು.
ಪ್ರತಿಯೊಂದು ಲಸಿಕಾ ಕೇಂದ್ರದಲ್ಲಿ ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಸೇರಿ ಮೂರು ಕೊಠಡಿ ಮೀಸಲಿಡಲಾಗಿದೆ. ಪ್ರತಿ ಕೇಂದ್ರದಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ ಸೇರಿ ಐದು ಮಂದಿಯನ್ನು ನಿಯೋಜಿಸಲಾಗಿದೆ, ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮೊದಲ ಹಂತದಲ್ಲಿ ಲಸಿಕೆ ಪಡೆಯಲಿದ್ದು, ಇದರ ಭಾಗವಾಗಿ ಆಯ್ದ ಮಂದಿಯನ್ನು ಬಳಸಿಕೊಂಡು ಇಂದು ಡ್ರೈರನ್ ನಡೆಸಲಾಗಿದೆ. ಕೋವಿಡ್ ಲಸಿಕೆ ನೀಡುವ ಪೂರ್ವದಲ್ಲಿ ನಡೆಸುವ ಅಣಕು ಕಾರ್ಯಾಚರಣೆಯೇ ಡ್ರೈರನ್ ಆಗಿದ್ದು, ಇದರಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ಹೊರತುಪಡಿಸಿ ಉಳಿದ ಎಲ್ಲಾ ಹಂತಗಳನ್ನು ಕಟ್ಟುನಿಟ್ಟಾಗಿ ಪಾಲೀಸಲಾಗುತ್ತದೆ. ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಸಿದ್ಧತೆಯನ್ನು ಡ್ರೈರನ್ ಮೂಲಕ ಪರಿಶೀಲಿಸಲಾಗುತ್ತದೆ.
@12bc =ಎರಡೇ ಹಂತದ ಡ್ರೈರನ್
ಮೊದಲನೇ ಹಂತದಲ್ಲಿ ಬೆಂಗಳೂರು (ಬಿಬಿಎಂಪಿ ಒಳಗೊಂಡಂತೆ), ಬೆಳಗಾವಿ, ಮೈಸೂರು, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಡೆಸಿದ ಡ್ರೈರನ್ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಎರಡನೇ ಹಂತದ ಡ್ರೈರನ್ ಕಾರ್ಯಾಚರಣೆ ನಡೆಸಲಾಗಿದೆ.
ಇಂದು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ/ ಪ್ರಾಥಮಿಕ ಆರೋಗ್ಯ ಕೇಂದ್ರ, ಖಾಸಗಿ ವೈದ್ಯಕೀಯ ಕಾಲೇಜು ಸೇರಿದಂತೆ 100ಕ್ಕಿಂತ ಹೆಚ್ಚು ಫಲಾನುಭವಿಗಳನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಡ್ರೈರನ್ ನಡೆಸಲಾಗಿದೆ.