ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಪೂರ್ಣ ಸಿದ್ದತೆ: ಜಿಲ್ಲಾಧಿಕಾರಿ

ಧಾರವಾಡ,ಜ13:ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಕೈಗೊಳ್ಳಲಿರುವ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತವು ಆರೋಗ್ಯ ಇಲಾಖೆಯಿಂದ ಪೂರ್ಣಸಿದ್ಧತೆ ಮಾಡಿಕೊಂಡಿದ್ದು, ನೋಂದಾಯಿತ ಕೋವಿಡ್ ವಾರಿಯರ್ಸ್‍ಗಾಗಿ ಸುಮಾರು 25 ಸಾವಿರ ಕೋವಿಸೀಲ್ಡ್ ಲಸಿಕೆ ಜಿಲ್ಲೆಗೆ ಬರುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ನೂತನ ಸಭಾಭವನದಲ್ಲಿ ಜರುಗಿದ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮ ಕುರಿತು ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು   ಜನೆವರಿ 13 ರಂದು ಬೆಳಗಾವಿಯ ಪ್ರಾದೇಶಿಕ ಲಸಿಕಾ ಕೇಂದ್ರದಿಂದ ರಸ್ತೆ ಮೂಲಕ ವಿಶೇಷ ಸುರಕ್ಷಿತ ವಾಹನದಲ್ಲಿ ಧಾರವಾಡಕ್ಕೆ ಆಗವಿಸುವ ಕೋವಿಸೀಲ್ಡ್ ಲಸಿಕಾ ಪೆಟ್ಟಿಗೆಗಳನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿರುವ ಜಿಲ್ಲಾ ಲಸಿಕಾ ಉಗ್ರಾಣದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ ಎಂದು ಅವರು ತಿಳಿಸಿದರು.

ಜನೆವರಿ 16 ರ ಬೆಳಿಗ್ಗೆ ಪ್ರಧಾನ ಮಂತ್ರಿಗಳು ಆನ್‍ಲೈನ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು. ಅದರಲ್ಲಿ ನಮ್ಮ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯು ಸೇರಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಣ್ಯರು ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಅಂದು (ಜ.16) ಕಿಮ್ಸ್ ಸೇರಿದಂತೆ, ಕುಂದಗೋಳ, ಕಲಘಟಗಿ, ನವಲಗುಂದ ತಾಲೂಕಾ ಆಸ್ಪತ್ರೆ ಮತ್ತು ಧಾರವಾಡ ತಾಲೂಕಿನ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರ, ಧಾರವಾಡ ಪುರೋಹಿತನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕಾಕರಣ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಮೊದಲ ಸುತ್ತಿನ ಲಸಿಕಾಕರಣದಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಂದ ಈಗಾಗಲೇ ನೋಂದಾಯಿತರಾಗಿರುವ ಸುಮಾರು 25 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆ ನೀಡಲು 33 ಖಾಸಗಿ ಆಸ್ಪತ್ರೆಗಳ 66 ಕೇಂದ್ರಗಳು ಮತ್ತು ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳು ಸೇರಿ 136 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ವೈದ್ಯರು, ಆರೋಗ್ಯ ಕಾರ್ಯಕರ್ತರು, ಸಹಾಯಕರು ಸೇರಿ 5 ಜನರಿರುವ ಲಸಿಕಾ ತಂಡಗಳನ್ನು ರಚಿಸಲಾಗಿದ್ದು 136 ತಂಡಗಳ 680 ಜನ ಆರೋಗ್ಯ ಸಿಬ್ಬಂದಿ ಲಸಿಕಾ ಕಾರ್ಯವನ್ನು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪ್ರತಿ ತಂಡ ಹಾಗೂ ತಾಲೂಕಾ ಮಟ್ಟದಲ್ಲಿ ಮೇಲುಸ್ತುವಾರಿ ಹಾಗೂ ಮೇಲ್ವಿಚಾರಣೆಗಾಗಿ ತಹಸಿಲ್ದಾರ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕಾಮಟ್ಟದ ಅಧಿಕಾರಿಗಳನ್ನು ಸುಪರವೈಜರಗಳನ್ನಾಗಿ ನೇಮಿಸಲಾಗಿದೆ. ಪ್ರತಿ ಲಸಿಕಾ ಕೇಂದ್ರದಲ್ಲಿ ಪ್ರತ್ಯೇಕವಾಗಿ ಮೂರು ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ನೊಂದಾಯಿತರು ಆಗಮಿಸಿದಾಗ ನಿರೀಕ್ಷಣಾ ಕೊಠಡಿಯಲ್ಲಿ ನೋಂದಣಿ ಹಾಗೂ ದಾಖಲೆಗಳ ಪರಿಶೀಲನೆ, ಲಸಿಕಾ ಕೊಠಡಿಯಲ್ಲಿ ಲಸಿಕೆ ಹಾಕುವುದು ಮತ್ತು ಲಸಿಕೆ ಪಡೆದ ನಂತರ ಅವರ ಆರೋಗ್ಯ ಗಮನಿಸಲು ಸುಮಾರು 30 ನಿಮಿಷ ನಿಗಾ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣ ತುರ್ತು ಚಿಕಿತ್ಸೆ ನೀಡಲು ವಿಶೇಷ ಆರೋಗ್ಯ ಸಲಕರಣೆ, ಔಷಧಿಗಳಿರುವ ಪೆಟ್ಟಿಗೆಗಳನ್ನು ಪ್ರತಿ ಕೇಂದ್ರಗಳಿಗೆ ನೀಡಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಅಂತವರನ್ನು ಗುರುತಿಸಲಾಗಿರುವ ಮುಖ್ಯ ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಅವರು ಕೋವಿಡ್-19ರ ಲಸಿಕಾಕರಣ ಕಾರ್ಯಕ್ರಮವನ್ನು ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ವಿವರಿಸಿ, ತಂಡ ಹಾಗೂ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ. ಸುಶೀಲಾ, ನಗರ ಉಪಪೊಲೀಸ ಆಯುಕ್ತ ರಾಮರಾಜನ್, ಮಹಾನಗರ ಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಡಬ್ಲು.ಎಚ್.ಓ. ಲಸಿಕಾ ವಿಭಾಗದ ಬೆಳಗಾವಿಯ ಅಧಿಕಾರಿ ಡಾ.ಸಿದ್ದಲಿಂಗಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ, ಜಿಲ್ಲೆ ಸರ್ವೆಕ್ಷಣಾಧಿಕಾರಿ ಡಾ.ಸುಜಾತಾ ಹಸವಿಮಠ, ಡಾ.ಶಶಿ ಪಾಟೀಲ, ಡಾ.ಕೆ.ಎನ್.ತನುಜಾ, ತಾಲುಕಾ ವೈಧ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳ ವೈಧ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.