ಕೋವಿಡ್ ಲಸಿಕೆ: ಆನ್‍ಲೈನ್ ನೊಂದಣಿ ಆದೇಶ ರದ್ದತಿಗೆ ಕಾಂಗ್ರೆಸ್ ಆಗ್ರಹ

ಕಲಬುರಗಿ.ಏ.28:18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ನೀಡಲು ಕಡ್ಡಾಯವಾಗಿ ಆನ್‍ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಬೇಕು ಎಂಬ ಆದೇಶವನ್ನು ರಾಜ್ಯ ಸರ್ಕಾರವು ಕೂಡಲೇ ಹಿಂಪಡೆಯಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜಗದೇವ್ ಗುತ್ತೇದಾರ್ ಕಾಳಗಿ ಅವರು ಒತ್ತಾಯಿಸಿದ್ದಾರೆ.
ಕೋವಿಡ್ ಎರಡನೇ ಅಲೆಯಿಂದ ಅನೇಕ ಜನರು ಮರಣ ಹೊಂದುತ್ತಿದ್ದಾರೆ. ಜಿಲ್ಲೆಯಲ್ಲಿ ಸೋಂಕು ವ್ಯಾಪಿಸುತ್ತಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಸುಳಿಯುತ್ತಿಲ್ಲ. ಕೋವಿಡ್ ತಡೆಯಲು ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ. ರೆಮಿಡೆಸಿವಿಯರ್ ಇಂಜಕ್ಷನ್ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ. ಆದಾಗ್ಯೂ, ಸರ್ಕಾರ ಕಣ್ಣುಮುಚ್ಚಿಕೊಂಡಿದೆ. ಈಗ ಕೋವಿಡ್-19 ಲಸಿಕೆ ಪಡೆಯಲು ಆನ್‍ಲೈನ್ ಮೂಲಕ ನೊಂದಣಿ ಮಾಡಿಸಲು ಆದೇಶ ಹೊರಡಿಸಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ರೀತಿಯಲ್ಲಿ ರೈತರು, ಕೃಷಿ ಕೂಲಿ ಕಾರ್ಮಿಕರು, ಕಡು ಬಡವರು, ಅದೇ ರೀತಿಯಲ್ಲಿ ನಗರಗಳಲ್ಲಿಯೂ ಸಹ ಕೂಲಿ ಕಾರ್ಮಿಕರು, ಅವಿದ್ಯಾವಂತರು ನೊಂದಣಿ ಮೂಲಕ ಲಸಿಕೆ ಪಡೆಯಲು ಅಸಾಧ್ಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಪಿಎಲ್ ಕಾರ್ಡುದಾರರಿಗೆ ನೀಡಲಾಗುವ ಪಡಿತರ ಅಕ್ಕಿ 10 ಕೆಜಿ ಬದಲು 2 ಕೆಜಿಗೆ ಕಡಿಮೆಗೊಳಿಸುವ ಮೂಲಕ ಬಡವರ ಜೀವನವನ್ನೇ ಪಡೆಯುತ್ತಿದೆ. ಇದರಿಂದ ಸಾಯುವ ಸಂದರ್ಭ ಬಂದೊದಗುತ್ತದೆ ಎಂದು ರೈತ ಮನವಿ ಮಾಡಿದಾಗ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಅವರು ಸಮಸ್ಯೆಗೆ ಸ್ಪಂದಿಸದೇ ಸತ್ತರೇ ಸಾಯಲಿ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿಗಳು ಕೂಡಲೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಉಮೇಶ್ ಕತ್ತಿ ಅವರ ಅವಹೇಳನಕಾರಿ ಹೇಳಿಕೆಯನ್ನು ಕೆಪಿಸಿಸಿಐ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಖಂಡಿಸಿದ್ದಕ್ಕೆ ಅವನಾರು ಎಂದು ಏಕವಚನದಲ್ಲಿ ಕತ್ತಿ ಅವರು ಮಾತನಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಉನ್ನತ ಸ್ಥಾನದಲ್ಲಿದ್ದಾರೆ. ಅವರು ತಪ್ಪು ಎತ್ತಿ ತೋರಿಸಿದ್ದಾರೆ. ಸಚಿವ ಕತ್ತಿ ಅವರು ಜವಾಬ್ದಾರಿಯರಿತು ಮಾತನಾಡಬೇಕು. ಸಚಿವ ಸ್ಥಾನಕ್ಕೆ ಶೋಭೆ, ಗೌರವ ತರುವಂತಹ ಶಬ್ದಗಳನ್ನು ಕತ್ತಿ ಅವರು ಉಪಯೋಗಿಸಬೇಕು ಎಂಧು ಅವರು ಆಗ್ರಹಿಸಿದ್ದಾರೆ.