ಕೋವಿಡ್ ಲಸಿಕೆಗಾಗಿ 1,507 ಕೇಂದ್ರ ಗುರುತು: ಮಂಜುನಾಥ ಪ್ರಸಾದ್

ಬೆಂಗಳೂರು, ಜ.9-ಕೋವಿಡ್ ಲಸಿಕೆ ಹಂಚಿಕೆ ಸಂಬಂಧ ರಾಜಧಾನಿ ಬೆಂಗಳೂರಿನಲ್ಲಿ 1,507 ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.

ನಗರದಲ್ಲಿಂದು ಮಲ್ಲೇಶ್ವರಂ ಐಪಿಪಿ ಸಭಾಂಗಣದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ಹಂಚಿಕೆ ಹಾಗೂ ಕೋವಿಡ್ ಸಂಪರ್ಕ ಪತ್ತೆ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಡೆಸ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆಯನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಸಂಬಂಧ ಸರಿಯಾದ ಯೋಜನೆ ರೂಪಿಸಿಕೊಂಡು ಕಾರ್ಯನಿರ್ವಹಿಸಬೇಕು. ಈ ಪೈಕಿ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ನೀಡಲು 1,507 ಕೇಂದ್ರಗಳನ್ನು ಗುರುತಿಸಿದ್ದು, ಪ್ರತಿ 5 ಕೇಂದ್ರಗಳಿಗೊಬ್ಬರಂತೆ ಒಟ್ಟು 300 ಸೆಕ್ಟರ್ ಅಧಿಕಾರಿಗಳನ್ನು ಗುರುತಿಸಿ ನಿಯೋಜನೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಸಿಕೆ ಹಂಚಿಕೆ ಮಾಡುವ ಕೇಂದ್ರಗಳಿಗೆ ಗುರುತಿಸುವ ಸೆಕ್ಟರ್ ಅಧಿಕಾರಿಗಳಿಗೆ ಏನೆಲ್ಲಾ ಜವಾಬ್ದಾರಿಗಳಿರಲಿವೆ ಎಂಬುದರ ಬಗ್ಗೆ ತರಬೇತಿ ನೀಡಿ ಸಮರ್ಪಕ ಮಾಹಿತಿ ನೀಡಬೇಕು. ನೇಮಕ ಮಾಡುವ ಅಧಿಕಾರಿಗಳಿಗೆ ಲಸಿಕಾ ಕೇಂದ್ರಗಳ ಮಾರ್ಗ ನಕ್ಷೆ, ವಾಹನದ ವ್ಯವಸ್ಥೆ ಮಾಡಬೇಕು.

ಲಸಿಕೆ ಹಂಚಿಕೆಯಲ್ಲಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಲಸಿಕೆ ಹಂಚಿಕೆ ಸಂಬಂಧ ಒಂದೇ ರೀತಿಯ ವ್ಯವಸ್ಥೆ ಮಾಡಿಕೊಂಡು ಲಸಿಕೆ ಹಂಚಿಕೆ ಮಾಡಲು ಯೋಜನೆ ರೂಪಿಸಿಕೊಳ್ಳಬೇಕು. ಪ್ರತಿ ಕೇಂದ್ರದಲ್ಲಿ‌ ದಿನಕ್ಕೆ 100 ಮಂದಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು.

ಪ್ರತಿ ಲಸಿಕೆ ವಿತರಣೆ ಕೇಂದ್ರಕ್ಕೂ ಆಂಬ್ಯುಲೆನ್ಸ್ ಹಾಗೂ ಆಸ್ಪತ್ರೆಯನ್ನು ಲಿಂಕ್ ಮಾಡಿರಬೇಕು. ಲಸಿಕೆ ನೀಡುವ ಸಮಯದಲ್ಲಿ ಫಲಾನುಭವಿಗಳ ಆರೋಗ್ಯದಲ್ಲಿ ಏರುಪೇರಾದಲ್ಲಿ ಕೂಡಲೆ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿಕೊಂಡಿರಬೇಕು ಎಂದು ತಿಳಿಸಿದರು.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುತ್ತಿದ್ದು, ಎರಡನೇ ಹಂತದಲ್ಲಿ ಕೋವಿಡ್ ಸಮಯದಲ್ಲಿ ಕಾರ್ಯನಿರ್ವಹಿಸಿರುವ ಪಾಲಿಕೆ ಸಿಬ್ಬಂದಿ, ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಕಂದಾಯ ಅಧಿಕಾರಿಗಳು ಸೇರಿದಂತೆ ಫ್ರಂಟ್ ಲೈನ್ ವರ್ಕರ್ಸ್ ಗಳಿಗೆ ಲಸಿಕೆ ನೀಡಲಾಗುವುದು.

ಮೂರನೇ ಹಂತದಲ್ಲಿ ಮತದಾರರ ಪಟ್ಟಿಯ ಆಧಾರದಲ್ಲಿ ಗುರುತಿಸಿ 50 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಮತ್ತು 50 ವರ್ಷಕ್ಕಿಂತ ಕಡಿಮೆಯಿರುವ ಅನ್ಯ ಖಾಯಿಲೆಗಳಿಂದ ಬಳಲುತ್ತಿರುವ(ಕೋಮ್ ಆರ್ಬಿಟ್) ವ್ಯಕ್ತಿಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ಇನ್ನು, ನಗರದಲ್ಲಿ ಮೊದಲ ಹಂತದಲ್ಲಿ ಲಸಿಕೆ ನೀಡಲು 1,75,000 ಆರೋಗ್ಯ ಕಾರ್ಯಕರ್ತರನ್ನು ಕೋವಿನ್ ಪೋರ್ಟಲ್ ನಲ್ಲಿ ದಾಖಲಿಸಲಾಗಿದೆ. ಪ್ರತಿ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡಲು ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ರಾಜೇಂದ್ರ ಚೋಳನ್, ಜೆ.ಮಂಜುನಾಥ್, ಮನೋಜ್ ಜೈನ್, ಬಸವರಾಜು, ತುಳಸಿ ಮದ್ದಿನೇನಿ ಸೇರಿದಂತೆ ಪ್ರಮುಖರಿದ್ದರು.