ಕೋವಿಡ್ ಲಸಿಕಾಕರಣ ತೀವ್ರಗೊಳಿಸಲು ಸೂಚನೆ

ಕಲಬುರಗಿ,ನ.20:ಜಿಲ್ಲೆಯಲ್ಲಿ ಕೋವಿಡ್ ಮೊದಲನೇ ಡೋಸ್ ಪಡೆದವರ ಪ್ರಮಾಣ ಶೇ.75 ಮಾತ್ರವಿದ್ದು, ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಸಿಕಾಕರಣ ಕಾರ್ಯ ಮತ್ತಷ್ಟು ಚುರುಕುಗೊಳಿಸಬೇಕು ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಕೈಗಾರಿಕಾಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕಿ ಗುಂಜನ ಕೃಷ್ಣ ಅವರು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.
ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೋವಿಡ್ ಪರಿಸ್ಥಿತಿ, ನೆರೆ ಹಾವಳಿ ಸೇರಿದಂತೆ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಬರುವ ನವೆಂಬರ್ 22 ರಿಂದ ಪ್ರತಿ ದಿನ ಶೇ.1ರಂತೆ ಮುಂದಿನ 15 ದಿನದಲ್ಲಿ ಕೋವಿಡ್ ಮೊದಲನೇ ಡೋಸ್ ಪ್ರಮಾಣ ಶೇ.90ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಗುರಿ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ ಮೊದಲನೇ ಡೋಸ್ ಪಡೆದವರ ಪೈಕಿ ಆರೋಗ್ಯ ಕಾರ್ಯಕರ್ತೆಯರು ಶೇ.94 ಮಾತ್ರ ಪಡೆದಿದ್ದು, ಉಳಿದ ಶೇ.6ರಷ್ಟು ಕಾರ್ಯಕರ್ತೆಯರು ಇನ್ನೂ ಏಕೆ ಲಸಿಕೆ ಪಡೆದಿಲ್ಲ ಎಂದು ಪ್ರಶ್ನಿಸಿದರು. ಇನ್ನೂ 18-44 ವಯಸ್ಸಿನವರಲ್ಲಿ ಕೇವಲ 65ರಷ್ಟು ಜನರು ಮಾತ್ರ ಪಡೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಯೂರೋಪ್ ದೇಶದಲ್ಲಿ ಕೋವಿಡ್ ಉಲ್ಬಣಗೊಂಡಿದ್ದು, ಇದಕ್ಕೆ ಕಾರಣ ಅಲ್ಲಿ ಶೇ.80ರಷ್ಟು ಜನ ಇನ್ನೂ ಲಸಿಕೆ ಪಡೆದಿಲ್ಲ ಎಂಬುದನ್ನು ಅಧಿಕಾರಿಗಳು ಅರಿಯಬೇಕು ಎಂದ ಅವರು ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯಲು ಅರಿವು ಮೂಡಿಸಲು ಎನ್.ಜಿ.ಓ. ಸಹಕಾರ ಪಡೆಯಬೇಕು. ಕಾಲೇಜುಗಳಲ್ಲಿ ಲಸಿಕಾಕರಣ ಕ್ಯಾಂಪ್ ಆಯೋಜಿಸಬೇಕು ಎಂದು ಡಿ.ಹೆಚ್.ಓ. ಡಾ.ಶರಣಬಸಪ್ಪ ಗಣಜಲಖೇಡ್ ಮತ್ತು ಆರ್.ಸಿ.ಹೆಚ್ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಅವರಿಗೆ ನಿರ್ದೇಶನ ನೀಡಿದರು.
ಕೃಷಿ ಇಲಾಖೆ ಚರ್ಚೆ ವೇಳೆಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಪ್ರಸಕ್ತ 2021-22ನೇ ಸಾಲಿನಲ್ಲಿ 79243 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರು ಹೇಳಿದರು. ಜಿಲ್ಲೆಯಲ್ಲಿ 4 ಲಕ್ಷ ಆರ್.ಟಿ.ಸಿ. ಹೋಲ್ಡರ್‍ಗಳಿದ್ದರು ಬಿಮಾ ನೋಂದಣಿಯಲ್ಲಿ ಕಡಿಮೆ ಏಕೆ ಎಂದು ಪ್ರಶ್ನಿಸಿ ರೈತರಿಗೆ ಕೃಷಿ ಸಾಲ ಸಮಪರ್ಕವಾಗಿ ವಿತರಣೆಯಾಗುತ್ತಿಲ್ಲವೆ ಅಧಿಕಾರಿಗಳನ್ನು ಪ್ರಶ್ನಿಸಿದ ಗುಂಜನ ಕೃಷ್ಣ ಅವರು ಬ್ಯಾಂಕ್‍ಗಳಿಂದ ರೈತರಿಗೆ ಸರಿಯಯಾಗಿ ಸಾಲ ವಿತರಣೆ ಮಾಡುತ್ತಿಲ್ಲವೆಂದರೆ ನನ್ನ ಗಮನಕ್ಕೆ ತನ್ನಿ. ರಾಜ್ಯ ಮಟ್ಟದಲ್ಲಿ ನಡೆಯುವ ಬ್ಯಾಂಕರ್ಸ್ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 80 ಲಕ್ಷ ಮಾನವ ದಿನ ಸೃಜನೆಗೆ ಗುರಿ ನೀಡಲಾಗಿದ್ದು, ಇದೂವರೆಗೆ ಶೇ.70ರಷ್ಟು ಗುರಿ ತಲುಪಿದೆ. 2022ರ ಮಾರ್ಚ್ ಅಂತ್ಯಕ್ಕೆ ಶೇ.100ಕ್ಕಿಂತ ಹೆಚ್ಚಿನ ಸಾಧನೆ ಮಡಲಾಗುವುದು. ಜಲ ಜೀವನ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 26 ಹೊಸ ಕುಡಿಯುವ ನೀರಿನ ಕಾಮಗಾರಿಗಳು ಕೈಗೆತ್ತಿಕೊಳ್ಳಲಾಗಿದೆ. 2019ರ ಪೂರ್ವ ಜಿಲ್ಲೆಯಲ್ಲಿ 1.8 ಲಕ್ಷ ಗ್ರಾಮೀಣ ಕುಟುಂಬಗಳ ಮನೆಗೆ ನಲ್ಲಿ ಸಂಪರ್ಕಗಳಿವೆ. ಬರುವ 2023ಕ್ಕೆ ಶೇ.100ರಷ್ಟು ನಲ್ಲಿ ಸಂಪರ್ಕ ಜೋಡಿಸುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ಬ್ರಿಡ್ಜ್ ಕೋರ್ಸ್ ಆರಂಭಿಸಿ: ಕೋವಿಡ್ ಕಾರಣ ಕಳೆದ 2 ವರ್ಷಗಳಿಂದ ಮುಚ್ಚಲ್ಪಟ್ಟ ಶಾಲೆಗಳು ಇದೀಗ ತೆರೆದಿವೆ. ಆನ್‍ಲೈನ್ ಕ್ಲಾಸ್‍ಗಳಿಂದ ಬಹುತೇಕ ಗ್ರಾಮೀಣ ಭಾಗದ ಮಕ್ಕಳು ವಂಚಿತರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬ್ರಿಡ್ಜ್ ಕೋರ್ಸ್ ಆರಂಭಿಸುವಂತೆ ಡಿ.ಡಿ.ಪಿ.ಐ ಅಶೋಕ ಬಿ. ಭಜಂತ್ರಿ ಅವರಿಗೆ ಗುಂಜನ ಕೃಷ್ಣ ನಿರ್ದೇಶನ ನೀಡಿದರು.
ಇದೇ ವೇಳೆಯಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪಶು ಸಂಗೋಪನೆ ಸೇರಿದಂತೆ ಇನ್ನಿತರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಯಿತು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸಹಾಯಕ ಆಯುಕ್ತೆ ಮೋನಾ ರೋಟ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.