ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಕರೆ

ಚಿತ್ರದುರ್ಗ,ಏ.25: ಕೋವಿಡ್ ಮೊದಲ ಹಂತಕ್ಕಿಂತಲೂ ಎರಡನೇ ಹಂತದಲ್ಲಿ ತೀವ್ರತರವಾಗಿ ಹರಡುತ್ತಿದ್ದು ಇದರ ನಿಯಂತ್ರಣಕ್ಕಾಗಿ ಅಗತ್ಯವಿರುವ ಎಲ್ಲಾ ಸಿದ್ದತೆ ಮಾಡಿಕೊಳ್ಳಬೇಕು. ಜನರು ಸಹ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದರು.
 ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೋವಿಡ್ ಹಾಗೂ ಕೃಷಿ ಚಟುವಟಿಕೆಗಳ ಕುರಿತಂತೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಕೋವಿಡ್ ಹೆಚ್ಚಾಗುತ್ತಿದ್ದು ಅದಕ್ಕಾಗಿಯೇ ಸರ್ಕಾರ ಕಠಿಣ ಕ್ರಮವನ್ನು ಕೈಗೊಂಡಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೋವಿಡ್ ಬರುವುದಕ್ಕಿಂತಲೂ ಬರುವುದನ್ನು ತಡೆಗಟ್ಟುವುದು ಸರ್ಕಾರದ ಗುರಿಯಾಗಿದೆ. ಅದಕ್ಕಾಗಿಯೇ ಮೇ 4ರವರೆಗೆ ನೀಡಿರುವ ಎಲ್ಲಾ ಮಾರ್ಗಸೂಚಿಯನ್ನು ಅನುಸರಿಸಬೇಕೆಂದು ತಿಳಿಸಿದರು.
 ಕೋವಿಡ್ ಪಾಸಿಟೀವ್ ಆಗಿ ಮನೆಯಲ್ಲಿ ಇರಲು ಪ್ರತ್ಯೇಕ ವ್ಯವಸ್ಥೆ ಯಾರಿಗೆ ಇರುವುದಿಲ್ಲ, ಅಂತಹ ರೋಗಿಯನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಸ್ಥಳಾಂತರಿಸಬೇಕು. ಇಲ್ಲದಿದ್ದಲ್ಲಿ ಮನೆಯವರಿಗೆಲ್ಲ ಹರಡುತ್ತಾರೆ. ಎಲ್ಲೆಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿವೆ ಅಂತಹ ಕಡೆ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಬೇಕು. ಕೋವಿಡ್ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಪಾಳಿಯ ಆಧಾರದ ಮೇಲೆ ಕೆಲಸ ಮಾಡಲು ಮತ್ತು ಇವರು ತಂಗಲು ಪ್ರತ್ಯೇಕ ವ್ಯವಸ್ಥೆಗಾಗಿ ಲಾಡ್ಜ್‍ಗಳನ್ನು ಬಳಕೆ ಮಾಡಿಕೊಳ್ಳಲು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ; ಕೆ.ನಂದಿನಿದೇವಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.