ಕೋವಿಡ್ ರೋಗಿಗಳ ರಕ್ಷಿಸಿ, ಜನರ ಜೀವ ಉಳಿಸಿ: ಏಳು ಎಡ, ಜಾತ್ಯಾತೀತ ಪಕ್ಷಗಳ ಒಕ್ಕೂಟದಿಂದ ಆನ್‍ಲೈನ್ ಪ್ರತಿಭಟನೆ

ಕಲಬುರಗಿ.ಜೂ.1:ಕೋವಿಡ್ ರೋಗಿಗಳನ್ನು ರಕ್ಷಿಸಿ, ಜನರ ಜೀವವನ್ನು ಉಳಿಸಲು ಒತ್ತಾಯಿಸಿ ರಾಜ್ಯ ಮಟ್ಟದ ಹೋರಾಟಕ್ಕೆ ಪೂರಕವಾಗಿ ಜಿಲ್ಲೆಯಲ್ಲಿಯೂ ಸಹ ಏಳು ಎಡ ಹಾಗೂ ಜಾತ್ಯಾತೀತ ಪಕ್ಷಗಳ ಒಕ್ಕುಟ, ಸ್ವರಾಜ್ ಇಂಡಿಯಾ ಪಕ್ಷ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ಮಂಗಳವಾರ ಮನೆ, ಮನೆಗಳಿಂದಲೂ ಆನ್‍ಲೈನ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ಸಾರ್ವತ್ರಿಕ ಉಚಿತ ಲಸಿಕೆ, ಔಷಧಿ, ಚಿಕಿತ್ಸೆಯನ್ನು ನೀಡುವಂತೆ, ರೈತರು, ಕಾರ್ಮಿಕರ ವಿರೋಧಿ ಕಾನೂನುಗಳನ್ನು ರದ್ದುಪಡಿಸುವಂತೆ, 200 ದಿನಗಳವರೆಗೆ ಉದ್ಯೋಗ ಖಾತ್ರಿಯನ್ನು ನೀಡುವಂತೆ ಮತ್ತು ಅದನ್ನು ನಗರಗಳಿಗೂ ವಿಸ್ತರಿಸುವಂತೆ, ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ, ರಾಜ್ಯದಲ್ಲಿ ಆಮ್ಲಜನಕ ಕೊರತೆಯನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ, ರಾಜ್ಯದಲ್ಲಿ ಉತ್ಪಾದನೆ ಕೊರತೆಯಾದರೆ ಕೇಂದ್ರವನ್ನು ಆಗ್ರಹಿಸುವಂತೆ ಪ್ರತಿಭಟನೆಕಾರರು ಒತ್ತಾಯಿಸಿದರು.
ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಒಂದೇ ದಿನದಲ್ಲಿ ವರದಿ ಬರುವಂತೆ ಕ್ರಮ ಕೈಗೊಳ್ಳುವಂತೆ, ತಕ್ಷಣವೇ ಸಮರ್ಪಕ ಪ್ರಮಾಣದಲ್ಲಿ ಆಸ್ಪತ್ರೆಗಳು, ಹಾಸಿಗೆಗಳು, ವೆಂಟಿಲೇಟರ್‍ಗಳು, ಐಸಿಯು ಹಾಸಿಗೆಗಳು ಮತ್ತು ವೈರಾಣು ವಿರೋಧಿ ಔಷಧಿಗಳನ್ನು ಜನರಿಗೆ ದೊರಕುವಂತೆ ಮಾಡುವಂತೆ, ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದು ಗಂಭೀರ ರೋಗ ಲಕ್ಷಣಗಳು ಇರುವವರಿಗೆ ಚಿಕಿತ್ಸೆ ಕೊಡುವಂತೆ, ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ, ಅವಶ್ಯಕ ಔಷಧಿಗಳ ಆಮ್ಲಜನಕಗಳ ಬೆಲೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವಂತೆ, ಅವುಗಳನ್ನು ಕಳ್ಳ ದಾಸ್ತಾನು ಹಾಗೂ ಕಾಳಸಂತೆಯನ್ನು ನಿಗ್ರಹಿಸುವಂತೆ ಅವರು ಆಗ್ರಹಿಸಿದರು.
ಮೂರನೇ ಅಲೆಗೆ ಸರ್ಕಾರಗಳು ಸೂಕ್ತ ಸಿದ್ದತೆ ಮಾಡಿಕೊಳ್ಳುವಂತೆ, ಎರಡನೇ ಅಲೆಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಯುದ್ದೋಪಾದಿಯಲ್ಲಿ ಪರಿಹಾರ ಕಾರ್ಯವನ್ನು ನಡೆಸಲು ಮತ್ತು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಹೆಚ್.ವಿ. ದಿವಾಕರ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ್ ಮಾಡಿಯಾಳ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ, ಆರ್‍ಪಿಐ (ಅಂಬೇಡ್ಕರ್ ವಾದ) ರಾಜ್ಯಾಧ್ಯಕ್ಷ ಎ.ಬಿ. ಹೊಸಮನಿ, ಆರ್‍ಪಿಐ (ಕರ್ನಾಟಕ) ಜಿಲ್ಲಾ ನಾಯಕ ಶರಣಬಸಪ್ಪ ಹೇರೂರ್, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡ ಶಿವಕುಮಾರ್ ರೇಷ್ಮಿ ಮುಂತಾದವರು ಪಾಲ್ಗೊಂಡಿದ್ದರು.