ಕೋವಿಡ್ ರೋಗಿಗಳ ಚಿಕಿತ್ಸೆ ಕೋರ್ಟ್‌ಗೆ ಮೊರೆ

ಬೆಂಗಳೂರು, ಏ. ೨೩- ರೆಮಿಡಿ ಸಿವಿಯರ್ ಔಷಧಿಗಳು ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಸಿಗುತ್ತಿಲ್ಲ ಆದರೆ ಕಾಳಸಂತೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ, ಇದನ್ನು ತಪ್ಪಿಸಿ ಸರ್ಕಾರ ಸೂಕ್ತ ಬೆಲೆ ನಿಗದಿಪಡಿಸಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಪೂರೈಸಬೇಕೆಂದು ನೆಲಮಂಗಲ ನರ್ಸಿಂಗ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಎಸ್. ಶಿವಕುಮಾರ್ ಅವರು ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಪತ್ರ ಬರೆದು ಸರ್ಕಾರಕ್ಕೆ ಸೂಚಿಸಬೇಕೆಂದು ಆಗ್ರಹಿಸಿದ್ದಾರೆ.
ರೆಮಿಡಿ ಸಿವಿಯರ್, ಆಕ್ಸಿಜನ್ ಸಿಲೆಂಡರ್, ಬೆಡ್ ಗಳು ಸಿಗದೇ ನಿತ್ಯ ಜನರು ಸಾಯುತ್ತಿದ್ದಾರೆ. ನೆಲಮಂಗಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮಿಡಿಸಿವಿಯರ್, ಆಕ್ಸಿಜನ್, ಔಷಧಿಗಳು ಬೆಡ್ ಗಳು ಸಿಗುತ್ತಿಲ್ಲವೆಂದು ಸಬೂಬು ಹೇಳುತ್ತಿರುವ ಆಸ್ಪತ್ರೆ ಸಿಬ್ಬಂಧಿಗಳು ಬೆಂಗಳೂರಿನ ವಿಕ್ಟೋರಿಯಾ, ಬೋರಿಂಗ್ ಆಸ್ಪತ್ರೆಗಳಿಗೆ ಹೋಗುವಂತೆ ಹೇಳುತ್ತಿದ್ದಾರೆ. ದಿನದಿಂದ ದಿನಕ್ಕೆ ಕೋವಿಡ್ ಹೆಚ್ಚುತ್ತಿದ್ದು ಆಸ್ಪತ್ರೆ ಸಿಬ್ಬಂಧಿಗಳು ಮತ್ತು ವೈದ್ಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೋವಿಡ್ ರೋಗಿಗಳು ಮತ್ತು ಸಾರ್ವಜನಿಕರು ದೂರುತ್ತಿದ್ದಾರೆ.
ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಿಸಲು, ಕೋವಿಡ್ ಲಸಿಕೆ ಪಡೆಯಲು ಸಾಲುಗಟ್ಟಲೆ ನಿಲ್ಲಿಸುತ್ತಾರೆ, ಇದರಿಂದ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕೋವಿಡ್ ಎರಡನೇ ಅಲೆ ಹೆಚ್ಚುತ್ತಿರುವುದರಿಂದ ಸರ್ಕಾರ ಕೂಡಲೇ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ರೆಮಿಡಿ ಸಿವಿಯರ್ ಇಂಜೆಕ್ಷನ್, ಆಕ್ಸಿಜನ್ ಬೆಡ್ ಗಳು ದೊರೆಯುವಂತೆ ಕ್ರಮವಹಿಸಬೇಕು ಮತ್ತು ಪ್ರತಿ ತಾಲೂಕಿಗೆ ಜೋನ್ ಆಫೀಸರ್ ನೇಮಕ ಮಾಡಿ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಎಸ್. ಶಿವಕುಮಾರ್ ಆಗ್ರಹಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಗೆ ಸಂಬಂಧಿಸಿದ ಔಷಧಿಗಳು ಸಿಗುತ್ತಿಲ್ಲವಾದ್ದರಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳು ಹೆಚ್ಚಾಗುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಬಡ ರೋಗಿಗಳು ಸಹ ಖಾಸಗಿ ಆಸ್ಪತ್ರೆಗಳಲ್ಲಿ ಸೇರಲು ಸುಮಾರು ೩೦ ರಿಂದ ೫೦ ಸಾವಿರ ಹಣವನ್ನು ಪಾವತಿಸಿದರೆ ಮಾತ್ರ ಬೆಡ್ ಸಿಗುತ್ತದೆ. ನಿತ್ಯ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬೆಡ್ ಸಿಗುತ್ತಿಲ್ಲ, ಅಲೆದು ಅಲೆದು ನರಳಿ ನರಳಿ ಸೂಕ್ತ ಚಿಕಿತ್ಸೆ ಮತ್ತು ಔಷಧಿ ದೊರೆಯದೆ ಅನೇಕ ಬಡ ರೋಗಿಗಳು ಸಾವನ್ನಪ್ಪುತ್ತಿದ್ದಾರೆಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ಆಸ್ಪತ್ರೆಗಳಲ್ಲಿ ಕೂಡಲೇ ಅಗತ್ಯಕ್ಕೆ ತಕ್ಕಷ್ಟು ಬೆಡ್, ಆಕ್ಸಿಜನ್, ಔಷಧಿ ಒದಗಿಸಿಕೊಡಲು ಸರ್ಕಾರಕ್ಕೆ ಆದೇಶಿಸುವಂತೆ ನರ್ಸಿಂಗ್ ಇನ್ಸ್ಟಿಟ್ಯೂಟ್ ಅಧ್ಯಕ್ಷ ಎಸ್. ಶಿವಕುಮಾರ್ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.