ಕೋವಿಡ್ ರೋಗಿಗಳ ಚಿಕಿತ್ಸೆಗೆ 200 ಹೆಚ್ಚುವರಿ ಬೆಡ್ ನಿರ್ಮಾಣಕ್ಕೆ ಮಂಜೂರಾತಿ

ಚಿತ್ರದುರ್ಗ,ಮೇ.೫; ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ 175 ಆಕ್ಸಿಜನ್ ಬೆಡ್‍ಗಳನ್ನು ನಿರ್ಮಾಣ ಮಾಡಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ 200 ಬೆಡ್‍ಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆರ್ಯೋಗಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
 ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು. ಇದಕ್ಕೆ ಬೇಕಾದ ಪೂರೈಕೆ ನಿರಂತರವಾಗಿರಬೇಕು. ಯಾವುದೇ ಕೋವಿಡ್ ರೋಗಿಗಳು ಉಸಿರಾಟದ ಸಮಸ್ಯೆ  ಎದುರಿಸುವ ಮುಂಚಿತಗವಾಗಿ ಇದನ್ನು ತಡೆಯಲು ಅಗತ್ಯವಿರುವ ಔಷದೋಪಚಾರವನ್ನು ಮಾಡಿಕೊಳ್ಳಬೇಕು.
ರೋಗಿಗಳಿಗೆ ಮೊದಲೇ ಜೀವರಕ್ಷಕ ಔಷಧಿ ನೀಡುವುದರಿಂದ ಅವರಿಗೆ ಉಸಿರಾಟದ ಸಮಸ್ಯೆ ಬರುವುದಿಲ್ಲ. ಉಸಿರಾಟದ ಸಮಸ್ಯೆ ಬಂದಾಗ ಆಗುವ ತೊಂದರೆ ಕಡಿಮೆ ಮಾಡಲು ಇಂತಹ ಔಷಧಿಗಳನ್ನು ಮೊದಲೇ ರೋಗಿಗಳಿಗೆ ನೀಡಿ, ಆಕ್ಸಿಜನ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಸೂಚನೆ ನೀಡಿದರು.
 ಚಿತ್ರದುರ್ಗಕ್ಕೆ ಬಳ್ಳಾರಿ, ಹೊಸಪೇಟೆ ಹಾಗೂ ದಾವಣಗೆರೆಯಿಂದ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳು ಇತರೆ ಜಿಲ್ಲೆಗಳಿಗೆ ಪೂರೈಕೆ ಮಾಡುವುದರ ಬಗ್ಗೆ ನಿಬರ್ಂಧ ವಿಧಿಸಿ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತಂದು ಆಕ್ಸಿಜನ್ ಪೂರೈಕೆಗೆ ಕ್ರಮವಹಿಸಲಾಗುವುದು. ಆದರೆ ನಮ್ಮ ಜಿಲ್ಲೆಗೆ ಎಷ್ಟು ಪ್ರಮಾಣದ ಆಕ್ಸಿಜನ್ ಬೇಕಾಗಿದೆ ಎಂಬ ದಿನನಿತ್ಯದ ಬೇಡಿಕೆ ನೀಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಸ್ಟೀರಾಯ್ಡ್ ಔಷಧಿ, ರೆಮ್‍ಡಿಸಿವಿರ್ ಕೊರತೆಯಾಗದಂತೆ ಪ್ರತಿನಿತ್ಯವೂ ಇಂಡೆಟ್ ಕಳುಹಿಸಿ ಪಡೆದುಕೊಳ್ಳಬೇಕು ಎಂದು ಸಹಾಯಕ ಔಷಧಿ ನಿಯಂತ್ರಣಾಧಿಕಾರಿಗಳಿಗೆ ತಿಳಿಸಿದರು.
 ಜಿಲ್ಲೆಯಲ್ಲಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 16 ಕಡೆ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ ಆರಂಭಿಸಲಾಗಿದ್ದು, ಪ್ರತಿ ಕೇಂದ್ರದಲ್ಲಿಲ್ಲೂ 30 ಆಕ್ಸಿಜನೇಟೆಡ್ ಬೆಡ್‍ಗಳನ್ನು ಆರಂಭಿಸಲಾಗುತ್ತಿದೆ ಎಂದು ಡಿಎಚ್‍ಒ ಡಾ.ಫಾಲಾಕ್ಷ ತಿಳಿಸಿದರು. ಈ ವೇಳೆ ಸರ್ಕಾರ ಮಟ್ಟದ ವೈದ್ಯಕೀಯ ಸಲಹಾ ಸಮಿತಿ ನೀಡಿರುವ ಪ್ರೋಟೊಕಾಲ್ ಅನ್ವಯ ಪ್ರತಿ ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಕ್ರಮವಹಿಸಲು ಎಲ್ಲ ವೈದ್ಯಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಸಂಸದರು ಸೂಚಿಸಿದರು.
ಮೊದಲ ಅಲೆಯಲ್ಲಿ ಇದ್ದಂತೆ ಈ ಸಂದರ್ಭದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇವೆ ಬಳಸಿಕೊಳ್ಳುತ್ತಿಲ್ಲವೋ, ಅವರು ಸೇವೆ ಮಾಡುತ್ತಿಲ್ಲವೋ ಗೊತಿಲ್ಲ. ಈ ಸಂದರ್ಭದಲ್ಲಿ ಅವರ ಸೇವೆ ಬಳಕೆ ಮಾಡಿಕೊಂಡು ಜನರಲ್ಲಿ ಜಾಗೃತಿ ಹಾಗೂ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಲು ಹಾಗೂ ಬೇರೆ ಕಡೆಯಿಂದ ಬರುವವರು ಮಾಹಿತಿ ಪಡೆದು ನಿಗಾವಹಿಸಲು ಸುಚಿಸಿದರು.
 ಹೊಸದುರ್ಗ ತಾಲ್ಲೂಕಿನಲ್ಲಿ ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂಕಿ ಅಂಶ ತೋರಿಸಿದ್ದಾರೆ. ಆದರೆ ವಾಸ್ತವದಲ್ಲಿ ಅಲ್ಲಿ ರೋಗಿಗಳು ಇಲ್ಲ. ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇವೆ ಎಂದು ಹೊರಗಡೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಇದ್ದು, ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸೂಕ್ತ ಕ್ರಮವಹಿಸಲು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಐಸಿಯು ಬೆಡ್‍ಗಳೊಂದಿಗೆ ಹೆಚ್ಚುವರಿ ಐಸಿಯು ಬೆಡ್ ನಿರ್ಮಾಣ ಮಾಡಿ ಇದಕ್ಕೆ ಬೇಕಾದ ಸಿಬ್ಬಂದಿಗಳನ್ನು ಆನ್‍ಕಾಲ್ ಆಧಾರದಲ್ಲಿ ಖಾಸಗಿ ವೈದ್ಯರ ಸೇವೆಯನ್ನು ಬಳಕೆ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ. ಆಕ್ಸಿಜನ್ ಔಷಧಿಗಳ ಪೂರೈಕೆಗಾಗಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಪ್ರತಿನಿತ್ಯವೂ ವಾಸ್ತವದ ವರದಿ ನೀಡಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜ್, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ.ಫಾಲಾಕ್ಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.