ಕೋವಿಡ್ ರೋಗಿಗಳು, ವಾರಿಯರ್‌ಗಳಿಗೆ ಮದುವೆ ಊಟ

ಬೀದರ:ಜೂ.1: ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಬಸವರಾಜ ಮಾಳಗೆ ಅವರ ಪುತ್ರಿ ಲಕ್ಷ್ಮಿ ಹಾಗೂ ಮನ್ನಾಎಖ್ಖೆಳ್ಳಿಯ ರಾಜಕುಮಾರ ಮೇಲಗೊಂಡ ಅವರು ಇಲ್ಲಿಯ ಬ್ರಿಮ್ಸ್ ಆಸ್ಪತ್ರೆ ಆವರಣದಲ್ಲಿ ರೋಗಿಗಳು, ಬಡವರು ಹಾಗೂ ಕೋವಿಡ್ ವಾರಿಯರ್‌ಗಳಿಗೆ ತಮ್ಮ ಮದುವೆ ಊಟ ವಿತರಿಸುವ ಮೂಲಕ ಗಮನ ಸೆಳೆದರು.

ನಗರದ ಗುರುನಗರದ ನಿವಾಸದಲ್ಲಿ ಅರತಕ್ಷತೆ ಮುಗಿಸಿಕೊಂಡು ಬಂದ ನವ ದಂಪತಿ 200 ಜನರಿಗೆ ಸಿಹಿ ತಿನಿಸು ಒಳಗೊಂಡ ಊಟದ ಪಾಕೇಟ್‍ಗಳನ್ನು ವಿತರಿಸಿದರು.

ಕೋವಿಡ್ ಸೋಂಕಿನ ಕಾರಣ ಮದುವೆ ಸಮಾರಂಭದಲ್ಲಿ ಹೆಚ್ಚು ಜನರಿಗೆ ಊಟ ಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ರೋಗಿಗಳು, ಬಡವರು ಹಾಗೂ ಕೋವಿಡ್ ವಾರಿಯರ್‍ಗಳಿಗೆ ಮದುವೆ ಊಟ ವಿತರಿಸಲಾಗಿದೆ ಎಂದು ರಾಜಕುಮಾರ ಮೇಲಗೊಂಡ ಹೇಳಿದರು.

ಬಡವರ ಸೇವೆಯಲ್ಲೇ ನಿಜವಾದ ಖುಷಿ ಅಡಗಿದೆ.ಬಡವರಿಗೆ ಊಟ ವಿತರಿಸಿ ತಮ್ಮ ಮದುವೆ ಸಂಭ್ರಮ ಹಂಚಿಕೊಂಡ ನವ ದಂಪತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ನುಡಿದರು.
ಮದುವೆ ಸಮಾರಂಭದ ಪ್ರಯುಕ್ತ ಸಾಮಾಜಿಕ ಚಟುವಟಿಕೆ ಕೈಗೊಂಡಿರುವುದು ಮಾದರಿಯಾಗಿದೆ. ಮದುವೆಗಳನ್ನು ಸರಳವಾಗಿ ನಡೆಸಬೇಕು. ಅನಗತ್ಯ ದುಂದು ವೆಚ್ಚ ಮಾಡಬಾರದು. ಜನರಿಗೆ ಉಪಕಾರಿ ಆಗುವ ರೀತಿಯಲ್ಲಿ ಸಂಘಟಿಸಬೇಕು ಎಂದು ಅವರು ಮನವಿ ಮಾಡಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ, ಮುಖಂಡರಾದ ಅಬ್ದುಲ್ ಮನ್ನಾನ್ ಸೇಠ್, ಅನಿಲಕುಮಾರ ಬೆಲ್ದಾರ್, ಬಸವರಾಜ ಮಾಳಗೆ ಮೊದಲಾದವರು ಇದ್ದರು.