ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲು

ಬೆಂಗಳೂರು, ಏ.೧-ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಸೋಂಕಿತನೊಂದಿಗೆ ಸಂಪರ್ಕ ಹೊಂದಿರುವ ೨೦ ಜನರನ್ನು ಪತ್ತೆಹಚ್ಚಲಾಗುವುದು ಎಂದು ಬಿಬಿಎಂಪಿ ನಿರ್ಗಮಿತ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನೂತನ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಅಧಿಕಾರ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಪರೀಕ್ಷೆ, ಪತ್ತೆ, ಲಸಿಕೆ(ಟಿಟಿಟಿ) ಕಾರ್ಯತಂತ್ರ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಓರ್ವ ಸೋಂಕಿತ ಬೆಳಕಿಗೆ ಬಂದರೆ, ಆತನ ಸಂಪರ್ಕದಲ್ಲಿರುವ ೨೦ ಮಂದಿಯನ್ನು ಪತ್ತೆಹಚ್ಚಿಸಲಾಗುವುದು. ಈ ಸಂಬಂಧ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರಯಾಣಿಕರ ಮೇಲೆ ಕಣ್ಣು: ನಗರದೆಲ್ಲೆಡೆ ಕಳೆದ ಡಿಸೆಂಬರ್‌ನಲ್ಲಿ ಪ್ರತಿದಿನಕ್ಕೆ ೬೦೦ ಮಾತ್ರ ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆನಂತರ, ಜನವರಿಯಲ್ಲಿ ೩೦೦, ಫೆಬ್ರವರಿಯಲ್ಲಿ ೨೪೩ಕ್ಕೆ ಇಳಿಕೆಯಾದವು. ಆದರೆ, ಇದಾದ ನಂತರ ಮಾರ್ಚ್ ತಿಂಗಳನಲ್ಲಿ ನೋಡಿದಾಗ ೨೪೩ರಿಂದ ೧೨೦೦ಕ್ಕೆ ತಲುಪಿದೆ. ಇನ್ನು, ಕಳೆದ ಎರಡು ದಿನಗಳಲ್ಲಿ ೩ ಸಾವಿರ ಗಡಿ ಮುಟ್ಟಿದೆ. ಹೀಗಾಗಿ, ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ ಎಂದರು.
ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಈಗಾಗಲೇ ಎರಡನೇ ಅಲೆ ಆರಂಭವಾಗಿರುವ ಹಿನ್ನೆಲೆ ಅಲ್ಲಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಂದಲೇ ಬೆಂಗಳೂರಿನಲ್ಲಿ ಕೋವಿಡ್ ಹರಡಿದೆ. ಜತೆಗೆ, ಇತ್ತೀಚಿಗೆ ಪ್ರತಿಭಟನೆಗಳು, ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚಾಗಿರುವುದು ಒಂದು ಮುಖ್ಯ ಕಾರಣವಾಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದ ಅವರು, ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಮಾತ್ರ ನಾವು ಕೊರೊನಾ ನಿಯಂತ್ರಣ ಮಾಡಲು ಸಾಧ್ಯ ಎಂದರು.
ಹಾಸಿಗೆ ಕಾಯ್ದಿರಿಸಿ: ಎರಡನೇ ಅಲೆಯ ಭೀತಿ ಹಿನ್ನೆಲೆ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಬೇಕು. ಈ ಸಂಬಂಧ ಈಗಾಗಲೇ ಸಭೆ ನಡೆಸಲಾಗಿದ್ದು, ಶೇಕಡ ೧೦ರಷ್ಟು ಹಾಸಿಗೆ ಕಾಯ್ದಿರಿಸುವಂತೆ ಹೇಳಲಾಗಿದೆ. ಇನ್ನು, ಕೋವಿಡ್ ಅಲ್ಲದ ರೋಗಿಗಳನ್ನು ನಿಯಂತ್ರಿಸಬೇಕು ಎನ್ನುವ ಅಂಶವನ್ನು ಸಭೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಆಯುಕ್ತರು ನುಡಿದರು.

ಪ್ರತಿ ದಿನ ೬೦ ಸಾವಿರ ಪರೀಕ್ಷೆ
ಪ್ರತಿನಿತ್ಯ ಬೆಂಗಳೂರು ವ್ಯಾಪ್ತಿಯಲ್ಲಿ ೬೦ ಸಾವಿರ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಇದರಿಂದ ಸೋಂಕು ಹರಡುವುದನ್ನು ತಪ್ಪಿಸಬೇಕು.ಅಲ್ಲದೆ, ಯುವಕರಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿವೆ.ಆದರೆ, ಬೆಂಗಳೂರಿನಲ್ಲಿ ಮರಣ ಪ್ರಮಾಣ ಕಡಿಮೆಯಾಗಿದ್ದು, ೬೦ರಿಂದ ೮೦ ವರ್ಷದವರೇ ಹೆಚ್ಚಾಗಿ ಮೃತಪಟ್ಟಿರುವುದು ವರದಿಯಲ್ಲಿ ಗೊತ್ತಾಗಿದೆ ಎಂದು ಮಂಜುನಾಥ ಪ್ರಸಾದ್ ತಿಳಿಸಿದರು.

ಐಟಿ, ಕೈಗಾರಿಕಾ ಪ್ರದೇಶಗಳಲ್ಲೂ ಲಸಿಕೆ..
ಲಸಿಕೆ ವೇಗವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಐಟಿ, ಕೈಗಾರಿಕಾ ಪ್ರದೇಶಗಳಲ್ಲೂ ವೈದ್ಯಾಧಿಕಾರಿಗಳು ಲಸಿಕೆ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಇನ್ನು, ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿನಿತ್ಯ ೧.೫೦ ಲಕ್ಷ ಲಸಿಕೆಗಳನ್ನು ಹಾಕುವ ಗುರಿ ಹೊಂದಲಾಗಿದೆ.

-ಮಂಜುನಾಥ ಪ್ರಸಾದ್, ಬಿಬಿಎಂಪಿ ನಿರ್ಗಮಿತ ಆಯುಕ್ತ