ಕೋವಿಡ್ ರೋಗಿಗಳಿಗಾಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಅತ್ಯುತ್ತಮವಾಗಿ ನಿರ್ವಹಿಸಿ

ವಿಜಯಪುರ : ಮೇ.3: ಕೋವಿಡ್ ಮಹಾಮಾರಿಯನ್ನು ನಿಯಂತ್ರಿಸುವ ದಿಸೆಯಲ್ಲಿ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಜಾಗೃತಿಯಿಂದ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಕೋವಿಡ್-19 ಕುರಿತು ಆಸ್ಪತ್ರೆಗಳಲ್ಲಿ ಬೆಡ್‍ಗಳ ಸಮರ್ಪಕ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸಂವಾದ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಈಗಾಗಲೇ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ರ ನಿಯಂತ್ರಣಕ್ಕೆ ಅಧಿಕಾರಿಗಳು ನಿರಂತರ ಕರ್ತವ್ಯದಲ್ಲಿ ನಿರತರಾಗಿದ್ದು ,ಜಿಲ್ಲೆಯ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಕುರಿತು ಡಾ. ಧಾರವಾಡಕರ್ ಅವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ಷಣ ಕ್ಷಣಕ್ಕೂ ಜಿಲ್ಲಾಡಳಿತಕ್ಕೆ ಮಾಹಿತಿಯನ್ನು ಕೂಡ ಹಂಚಿಕೊಳ್ಳುತ್ತಿದ್ದು,ಅದರಂತೆ ಸಾಧ್ಯವಾದಷ್ಟು ಎಲ್ಲ ರೋಗಿಗಳಿಗೆ ಬೆಡ್ ಸಿಗುವಂತೆ ಪ್ರಯತ್ನ ನಡೆಸಬೇಕು. ಈ ದಿಸೆಯಲ್ಲಿ ಜಿಲ್ಲೆಯ ಹಲವಾರು ಪ್ರತಿಷ್ಠಿತ ಆಸ್ಪತ್ರೆಗಳು ಕೂಡ ಉತ್ತಮ ಪ್ರತಿಕ್ರಿಯೆ ತೋರುತ್ತಿವೆ ಎಂದು ಹೇಳಿದರು.
ಪ್ರತಿ 2 ಗಂಟೆಗಳಿಗೊಮ್ಮೆ ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಒಟ್ಟು ಬೆಡ್, ಸಾಮಾನ್ಯ ಬೆಡ್, ಐ. ಸಿ. ಯು. ಬೆಡ್, ಕುರಿತು ಮಾಹಿತಿ ಒದಗಿಸುತ್ತಿರಬೇಕು. ಈ ಮಾಹಿತಿ ಆಸ್ಪತ್ರೆಯವರು ನೀಡುತ್ತಿದ್ದು, ನೀವುಗಳು ಕೂಡ ನಿಖರವಾದ ಮಾಹಿತಿ ಪಡೆದು ತಂತ್ರಾಂಶದಲ್ಲಿ ಅಪ್ಡೇಟ್ ಮಾಡಲು ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅವಶ್ಯವಿದ್ದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಆಸ್ಪತ್ರೆಗಳಿಗೆ ಅಧಿಕಾರಿಗಳು ಭೇಟಿ ನೀಡುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಮಾಸ್ಕ, ಫೇಸ್ ಶೀಲ್ಡ್, ಸ್ಯಾನಿಟೈಸರ್ ಕಡ್ಡಾಯವಾಗಿ ಅನುಸರಿಸಬೇಕು. ಇದೆಲ್ಲದರ ನಂತರ ಮನೆಗೆ ತೆರಳಿದ ಮೇಲೆ ಕಡ್ಡಾಯವಾಗಿ ಬಿಸಿನೀರಿನ ಆವಿಯನ್ನು ತೆಗೆದುಕೊಂಡು ಮುಂದಿನ ಕೆಲಸ ಕಾರ್ಯಗಳನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ನಿಯಂತ್ರಣಕ್ಕೆ ಅಧಿಕಾರಿಗಳು ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದು, ಇದೇ ರೀತಿ ಮುಂದೆಯೂ ತಮ್ಮ ಕರ್ತವ್ಯಕ್ಕೆ ಚ್ಯುತಿ ಬರದಂತೆ ನಿಭಾಯಿಸಿ ಎಂದು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್ ಮಾತನಾಡಿ ಜಿಲ್ಲೆಯಲ್ಲಿ ರೆಮ್ ಡಿಸಿವರ್ ಔಷಧಿ ಕೂಡ ಎಲ್ಲ ರೋಗಿಗಳಿಗೆ ವಿತರಿಸುವಂತೆ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಯಾವುದೇ ರೋಗಿಗಳಿಗೆ ಔಷಧಿ ಕಡಿಮೆಯಾಗದಂತೆ ಪ್ರಯತ್ನಿಸಲಾಗುತ್ತಿದ್ದು, ಅದೇ ರೀತಿ ಆಕ್ಸಿಜನ್ ಕೂಡ ಲಭ್ಯತೆ ಮೇಲೆ ರೋಗಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ನೋಡಲ್ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ, ಡಾ.ಸಂಪತ್ ಕುಮಾರ ಗುಣಾರೆ, ಡಾ. ಧಾರವಾಡಕರ್, ಮಹಾನಗರ ಪಾಲಿಕೆ ಇಂಜಿನಿಯರಿಂಗ್ ವಿಭಾಗದ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.