ಕೋವಿಡ್ ರೋಗಿಗಳನ್ನು ರಕ್ಷಿಸಿ ಜನರ ಜೀವ ಉಳಿಸಿ: ಎಸ್‍ಯುಸಿಐನಿಂದ ಆನ್‍ಲೈನ್ ಪ್ರತಿಭಟನೆ

ಕಲಬುರಗಿ,ಮೆ.18: ಜಿಲ್ಲೆಯಾದ್ಯಂತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದಿ), ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ಮನೆಗಳಿಂದಲೇ ಮಂಗಳವಾರ ಆನ್‍ಲೈನ್ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಕಾರರು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಕೋವಿಡ್ ಎರಡನೇ ಅಲೆ ಕರ್ನಾಟಕವನ್ನು ಆವರಿಸಿದೆ. ಇಂತಹ ವಿಪತ್ತಿನ ಕುರಿತು ತಜ್ಞರು ಮುನ್ನೆಚ್ಚರಿಕೆ ನೀಡಿದರೂ ಕೂಡ ಕೊನೆ ಘಳಿಗೆಯವರಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ. ಐಸಿಯೂ ಮತ್ತು ವೆಂಟಿಲೇಟರ್‍ಗಳ ಕೊರತೆಯಿಂದ ರೋಗಿಗಳು ಪ್ರತಿ ದಿನ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ದೊರಕುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ನೋಡಲ್ ಕಚೇರಿಯಿಂದ ಕಳಿಸಿದಾಗಲೂ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವ ಘಟನೆಗಳಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ ರೋಗಿಗಳಿಗೆ ತಾರತಮ್ಯದ ಕಳಪೆ ಸೇವೆ ನೀಡುವ ಪ್ರಕರಣಗಳು ನಡೆಯುತ್ತಿವೆ. ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಲಭ್ಯವಿವೆ ಎಂಬ ಪಾರದರ್ಶಕ ಮಾಹಿತಿ ಸಾರ್ವಜನಿಕರಿಗೆ ದೊಕರದೇ ರೋಗಿಗಳ ಜೊತೆಗೆ ಅಲೆದಾಡುವಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಆರೋಪಿಸಿದರು.
ಲಭ್ಯವಿರುವ ಹಾಸಿಗೆಗಳನ್ನು ಅಗತ್ಯಕ್ಕೆ ತಕ್ಕಂತೆ ವಿತರಿಸುವ ಕೇಂದ್ರೀಕೃತ ವ್ಯವಸ್ಥೆಯೂ ಇಲ್ಲ. ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಬಡವರು ಸಾಧ್ಯವಾಗದೇ ಜೀವ ಬಿಡುತ್ತಿದ್ದಾರೆ. ಇದನ್ನು ತಡೆಯಬೇಕೆಂದರೆ ಎಲ್ಲ ಆಸ್ಪತ್ರೆಗಳ ಮಾಹಿತಿ ಇರುವ ವೆಬ್ ಪೋರ್ಟ್‍ಲ್ಲಿ ದೃಢಪಡಿಸಬೇಕು. ಮೊದಲನೇ ಅಲೆಯಲ್ಲಿ ಹೋಂ ಐಸೋಲೇಷನ್‍ನಲ್ಲಿ ಇರುವ ರೋಗಿಗಳಿಗೆ ಕನಿಷ್ಠ ಔಷಧಿಗಳನ್ನಾದರೂ ಸರ್ಕಾರ ಉಚಿತವಾಗಿ ವಿತರಿಸುತ್ತಿತ್ತು. ಈಗ ಅದೂ ಇಲ್ಲವಾಗಿದೆ. ಲಾಕ್‍ಡೌನ್‍ನಿಂದ ಆದಾಯವೂ ಇಲ್ಲದೇ ಬಡ ಸೋಂಕಿತರು ಕೈ ಚೆಲ್ಲಿ ಕೂರುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೋವಿಡ್ ಪರೀಕ್ಷಾ ವರದಿಗಳು ವಿಳಂಬವಾಗುತ್ತಿವೆ. ಸೋಂಕಿತರ ಪತ್ತೆ ಮತ್ತು ಐಸೋಲೇಷನ್ ಕೂಡ ವಿಳಂಬವಾಗುತ್ತಿದೆ. ಇರುವ ವೆಂಟಿಲೇಟರ್‍ಗಳನ್ನು ಬಳಸಲು ತರಬೇತಿಯುಳ್ಳ ಅರಿವಳಿಕೆ ತಜ್ಞರ ಮತ್ತು ತಂತ್ರಜ್ಞರ ಕೊರತೆ ಇದೆ. ನುರಿತ ವೈದ್ಯರು, ದಾದಿಯರು, ಪ್ರಯೋಗಾಲಯ ತಜ್ಞರು, ಡಿ ಗ್ರೂಪ್ ನೌಕರರು ಬೇಕಾಗಿದ್ದಾರೆ. ಕೋವಿಡ್ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಚಿಕಿತ್ಸಾ ಸೌಕರ್ಯಗಳನ್ನು ವ್ಯಾಪಕವಾಗಿ ವಿಸ್ತರಿಸಿ ಸಜ್ಜುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಬಳಲುತ್ತಿರುವ ರೋಗಿಗಳೊಂದಿಗೆ ಆಡಳಿತ ಮಂಡಳಿ ಅಮಾನವೀಯವಾಗಿ ವರ್ತಿಸುತ್ತಿದೆ. ಅಲ್ಲದೇ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಯಾವುದೇ ಚಿಕಿತ್ಸೆ ಇಲ್ಲದೇ ಗಂಟೆಗಂಟಲೇ ಸಮಯ ವ್ಯರ್ಥ ಮಾಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಸುಮಾರು 25 ವೆಂಟಿಲೇಟರ್‍ಗಳನ್ನು ಬಳಕೆ ಮಾಡದೇ ಮೂಲೆಗುಂಪಾಗಿದ್ದು, ಸರ್ಕಾರದ ನಿರ್ಲಕ್ಷ್ಯತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಟೀಕಿಸಿದರು.
ಜಿಮ್ಸ್ ಆಸ್ಪತ್ರೆಯಲ್ಲಿ ನೊಂದಣಿಯಾದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆಹಾರ, ಔಷಧಿ ನೀಡುತ್ತಿಲ್ಲ. ರೋಗಿಯ ಸಂಬಂಧಿಕರಿಗೆ ರೋಗಿಗಳನ್ನು ಭೇಟಿಯಾಗಿ ಧೈರ್ಯ ತುಂಬಲು ಅವಕಾಶ ನೀಡುತ್ತಿಲ್ಲ. ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಖಾಸಗಿ ಬೌನ್ಸರ್‍ಗಳನ್ನು ಹಾಕಿ ರೋಗಿ ಮತ್ತು ರೋಗಿಗಳ ಸಂಬಂಧಿಕರೊಂದಿಗೆ ಅನುಚಿತವಾದ ವರ್ತನೆಗಳು ಸಹ ನಡೆದಿವೆ. ಈ ಸಂದÀರ್ಭದಲ್ಲಿ ಆಸ್ಪತ್ರೆಯಲ್ಲಿ ರೋಗಿ ಮತ್ತು ಸಂಬಂಧಿಕರ ನಡುವೆ ಸಂಪರ್ಕ ಸಾಧಿಸಲು ಹಿರಿಯ ಅಧಿಕಾರಿಗಳ ನೋಡಲ್ ಸಮಿತಿ ನೇಮಿಸಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಸ್ತುಸ್ಥಿತಿ ಅರಿಯಬೇಕು. ರೋಗಿಗಳಿಗೆ ಉತ್ತಮ ಸೇವೆ ನೀಡಲು ವಿಫಲವಾಗಿರುವ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ, ಜಿಮ್ಸ್‍ದಲ್ಲಿರುವ ಐದ್ಯಕೀಯ ಸಲಕರಣೆಗಳು ಮತ್ತು ವೆಂಟಿಲೇಟರ್, ಆಮ್ಲಜನಕ ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಶ್ವೇತಪತ್ರ ಹೊರಡಿಸುವಂತೆ ಅವರು ಆಗ್ರಹಿಸಿದರು.
ಚಾಮರಾಜನಗರ್, ಕಲಬುರ್ಗಿ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಜೀವಗಳಿಗೆ ಸಂತಾಪ ಸೂಚಿಸಿದ ಅವರು, ಕನಿಷ್ಠ ಉಸಿರಾಡಲು ಪ್ರಾಣವಾಯುವನ್ನಾದರೂ ಸರ್ಕಾರ ಒದಗಿಸಿಲ್ಲ. ಇದು ಕೊಲೆಯಲ್ಲದೇ ಇನ್ನೇನು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಕೋವಿಡ್ ಚಿಕಿತ್ಸೆಗೆ ಇರುವ ತೀವ್ರ ಕೊರತೆಯನ್ನು ನೀಗಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಬಿಡುಗಡೆ ಮಾಡುವಂತೆ, ಆಸ್ಪತ್ರೆಯಲ್ಲಿ ನೊಂದಣೀಯಾಗಿರುವ ರೋಗಿಗಳಿಗೆ ಉತ್ತಮ ಆಹಾರ ಮತ್ತು ಸರಿಯಾದ ಔಷಧಿ ಪೂರೈಸುವಂತೆ, ಜಿಲ್ಲಾ ಆಸ್ಪತ್ರೆಯ ಹೊರಗಡೆ ಇರುವ ಬೌನ್ಸರ್‍ಗಳ ಕಾಟವನ್ನು ತಪ್ಪಿಸುವಂತೆ, ಅಗತ್ಯ ಹುದ್ದೆಗಳನ್ನು ಕೂಡಲೇ ನೇಮಕಾತಿ ಮಾಡಿಕೊಳ್ಳುವಂತೆ, ಫ್ರಂಟ್‍ಲೈನ್ ವಾರಿಯರ್ಸ್‍ಗಳಾದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಕಿಟ್‍ಗಳನ್ನು ನೀಡಿ ಅವರ ವೇತನವನ್ನು ವಿಶೇಷ ಪ್ಯಾಕೇಜ್‍ನೊಂದಿಗೆ ನಿಯತವಾಗಿ ಪಾವತಿಸುವಂತೆ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿಯನ್ನು ಆರಂಭಿಸಿ ಕನಿಷ್ಠ 200 ದಿನಗಳವರೆಗೆ ದಿನಕ್ಕೆ 600ರೂ.ಗಳ ಕೂಲಿಯನ್ನು ನೀಡುವಂತೆ, ಗ್ರಾಮೀಣ ಪ್ರದೇಶಗಳಲ್ಲಿ ಆಗುತ್ತಿರುವ ಅತೀ ಹೆಚ್ಚು ಸಾವು, ನೋವುಗಳನ್ನು ತಪ್ಪಿಸಲು ವ್ಯಾಪಕವಾದ ವೈದ್ಯಕೀಯ ವ್ಯವಸ್ಥೆಯನ್ನು ಮಾಡಿ ಗ್ರಾಮೀಣ ಜನರಿಗೆ ಉತ್ತಮ ಚಿಕಿತ್ಸೆಯನ್ನು ಖಾತ್ರಿಪಡಿಸುವಂತೆ, ಮೃತರ ಗೌರವಯುತ ಅಂತ್ಯಸಂಸ್ಕಾರಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳುವಂಗತೆ ಅವರು ಒತ್ತಾಯಿಸಿದರು.
ಆನ್‍ಲೈನ್ ಪ್ರತಿಭಟನೆಯಲ್ಲಿ ಎಚ್.ವಿ. ದಿವಾಕರ್, ಭೀಮಾಶಂಕರ್ ಮಾಡಿಯಾಳ್, ಶೌಕತ್ ಅಲಿ ಆಲೂರ್, ಎಸ್.ಆರ್. ಕೊಲ್ಲೂರ್, ಅರ್ಜುನ್ ಭದ್ರೆ, ಮಹೇಶ್ ಎಸ್.ಬಿ., ಮುಂತಾದವರು ಪಾಲ್ಗೊಂಡಿದ್ದರು.