ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಳ್ಳದಿದ್ದರೆ ಕ್ರಮ

 ಶಿವಮೊಗ್ಗ, ಎ. 26 : ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರೆ ಅಥವಾ ಚಿಕಿತ್ಸೆ ನೀಡಲು ವಿಳಂಬ ಮಾಡಿದರೆ ಅಥವಾ ಸರ್ಕಾರ ನಿಗದಿ ಮಾಡಿರುವ ದರಗಳಿಗಿಂತ ಹೆಚ್ಚಿನ ದರ ವಿಧಿಸಿದರೆ 1800 425 8330 ಗೆ ಹಾಗೂ 1912 ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ರವರು ಸಾರ್ವಜನಿಕರಿಗೆ ತಿಳಿಸಿದ್ದಾರೆ.ಈ ಕುರಿತಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. 080-22536200 ಗೆ ಕರೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.ಕೋವಿಡ್ ರೋಗಿಗಳಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸಾರ್ವಜನಿಕ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮೂಲಕ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಈ ಯೋಜನೆಯಡಿ ಇದುವರೆಗೆ ಹೆಸರು ನೋಂದಾಯಿಸದ ಖಾಸಗಿ ಆಸ್ಪತ್ರೆಗಳು ನೋಂದಾಯಿಸಿಕೊಳ್ಳುವಂತೆ ಅವರು ಹೇಳಿದ್ದಾರೆ.ಯೋಜನೆಯಡಿ ರೆಫರಲ್ ಮೂಲಕ ಸರ್ಕಾರಿ ಕೋಟಾದಡಿ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಕೋವಿಡ್ ರೋಗಿಗಳ ವೆಚ್ಚವನ್ನು ಸರ್ಕಾರ ಭರಿಸಲಿದೆ. ಸರ್ಕಾರಿ ಕೋಟಾದ ರೋಗಿಗಳಿಗೆ ರೆಮ್ಡಿಸಿವಿರ್ ಇಂಜೆಕ್ಷನ್ ಉಚಿತವಾಗಿ ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.ಒಂದೊಮ್ಮೆ ಕೋವಿಡ್ ರೋಗಿಗಳು  ಇಚ್ಚಾನುಸಾರ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಲ್ಲಿ ಸರ್ಕಾರ ನಿಗದಿಪಡಿಸಿರುವ ಈ ಕೆಳಕಂಡ ಮೊತ್ತವನ್ನು ರೋಗಿಗಳೇ ನೇರವಾಗಿ ಭರಿಸಬೇಕಾಗುತ್ತದೆ. ಜನರಲ್ ವಾರ್ಡ್ 10 ಸಾವಿರ ರೂ, ಎಚ್‍ಡಿಯು 12ಸಾವಿರ ರೂ, ಐಸೊಲೇಷನ್ ಐಸಿಯು ವೆಂಟಿಲೇಟರ್ ಇಲ್ಲದೆ 15 ಸಾವಿರ ರೂ, ವಿದ್ ವೆಂಟಿಲೇಟರ್ ರೂ. 25 ಸಾವಿರ ರೂ. ದರಗಳ ಮಿತಿ ನಿಗದಿಪಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.