ಕೋವಿಡ್ ರೋಗಿಗಳನ್ನು ಗುಣಪಡಿಸುವಲ್ಲಿ ರಾಜ್ಯದಲ್ಲಿಯೇ ವಿಜಯಪುರ ಜಿಲ್ಲೆ ಮುಂಚೂಣಿಯಲ್ಲಿ


ವಿಜಯಪುರ ಮೇ,28-ಜಿಲ್ಲೆಯಲ್ಲಿ ಕೈಗೊಂಡ ಅನೇಕ ರೀತಿಯ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಕೋವಿಡ್ ರೋಗಿಗಳ ಗುಣಮುಖ ಪ್ರಮಾಣದಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದ್ದು, ಎಲ್ಲರ ಸಹಕಾರದಿಂದ ಕೋವಿಡ್ ಸಾವಿನ ಪ್ರಮಾಣ ಸಹ ತಗ್ಗಿದೆ ಎಂದು ಜಿಲ್ಲಾಧಿಕಾರಿ ಪಿ, ಸುನಿಲ್ ಕುಮಾರ್ ಅವರು ತಿಳಿಸಿದರು.
ನಗರದ ಆಯುಷ್ ಆಸ್ಪತ್ರೆಗೆ ತಜ್ಞ ವೈದ್ಯರ ತಂಡದೊಂದಿಗೆ ಕೋವಿಡ್ 19 ಪ್ರಕರಣಗಳ, ಮರಣಗಳ ಕುರಿತು ಇಂದು ಪರಿಶೀಲನೆ ನಡೆಸಿದ ಅವರು ,ನಿರಂತರ ಹಾಗೂ ಹಗಲಿರುಳು ಶ್ರಮವಹಿಸಿ ಎಲ್ಲರ ಸಹಕಾರದಿಂದ ಕೋವಿಡ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಸಹ ಕಡಿಮೆಯಾಗಿದೆ. ಕೋವಿಡ್ ರೋಗಿಗಳನ್ನು ಈ ರೋಗದಿಂದ ಗುಣಪಡಿಸಲು ರಾಜ್ಯದಲ್ಲಿಯೇ ನಾವು ಮುಂಚೂಣಿಯಲ್ಲಿದ್ದು ಜಿಲ್ಲೆಯಲ್ಲಿ ಆಸ್ಪತ್ರೆಗಳಿಗೆ ಸಕಾಲಕ್ಕೆ ಆಕ್ಸಿಜನ್ ಪೂರೈಕೆ, ರೇಮಡಿಸಿವರ್ ಲಸಿಕೆಗಳ ಪೂರೈಕೆ ಮತ್ತು ಖಾಸಗಿ ಆಸ್ಪತ್ರೆಗಳ ಸಹಕಾರದಿಂದ ಜಿಲ್ಲೆಯಲ್ಲಿ ಕೋವಿಡ್ ಸಾವು ಪ್ರಮಾಣವು ಸಹ ಕೂಡ ಕಡಿಮೆಯಾಗಿದೆ ಎಂದು ಹೇಳಿದರು.
ಅದರಂತೆ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆಶಾ, ಅಂಗನವಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರನ್ನೊಳಗೊಂಡ ಕಾರ್ಯಪಡೆ ಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೋವಿಡ್ ಲಕ್ಷಣ ಉಳ್ಳವರನ್ನು ಹಾಗೂ ಕೋವಿಡ್ ಶಂಕಿತರನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆಗೆ ಒಳಪಡಿಸುತ್ತಿರುವುದರಿಂದ ಜಿಲ್ಲೆಯು ಕೋವಿಡ್ ರೋಗಿಗಳ ಗುಣಮುಖ ಪ್ರಮಾಣದಲ್ಲಿಯೂ ಮುಂಚೂಣಿಯಲ್ಲಿದ್ದೇವೆ. ಕೋವಿಡ್ ಸಂಪೂರ್ಣ ನಿರ್ಮೂಲನೆ ಆಗುವವರೆಗೂ ತಮ್ಮೆಲ್ಲರ ಸಹಕಾರವಿರಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೋವಿಡದಿಂದ ಸಂಭವಿಸಿದ ಮರಣಗಳ ಬಗ್ಗೆ, ಕೋವಿಡ್ ಪ್ರಕರಣಗಳ ಬಗ್ಗೆಯೂ ಪರಿಶೀಲನೆ ನಡೆಸಿದರು,ಸಭೆಯಲ್ಲಿ ಡಾ. ನಿತಿನ್ ಅಗರ್ವಾಲ್ ಕೋವಿಡ್ ರೋಗಿಗಳ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ. ಸರ್ಜನ್ ಶರಣಪ್ಪ ಕಟ್ಟಿ, ಡಾ. ಲಕ್ಕಣ್ಣವರ್, ಡಾ .ಬಿರಾದರ್ ಇತರರು ಉಪಸ್ಥಿತರಿದ್ದರು.