ಕೋವಿಡ್ ರೂಪಾಂತರ ವೈರಸ್ ಹಿನ್ನೆಲೆ, ಸಭೆ-ಸಮಾರಂಭಗಳಲ್ಲಿ 500 ಜನ ಮಾತ್ರ ಭಾಗವಹಿಸಲು ಅವಕಾಶ:ಡಿ.ಸಿ. ವಿ.ವಿ.ಜ್ಯೋತ್ಸ್ನಾ ಆದೇಶ

ಕಲಬುರಗಿ,ಡಿ.7: ಕೋವಿಡ್ ಮತ್ತು ಅದರ ರೂಪಾಂತರ ಓಮಿಕ್ರಾನ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪರಿಷ್ಕೃತ ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿದ್ದು, ಅದರಂತೆ ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಸಭೆ-ಸಮಾರಂಭಗಲ್ಲಿ 500 ಜನ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ‌ ವಿ.ವಿ.ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.

ಡಿ.3 ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ಮಾರ್ಗಸೂಚಿ ಜಾರಿಗೊಳಿಸಿ ಆದೇಶಿಸಲಾಗಿದ್ದು, 500ಕ್ಕೂ ಹೆಚ್ಚಿನ‌ ಜನ ಸೇರದಂತೆ ಸಂಘಟಕರ ಹಾಗೂ ವ್ಯವಸ್ಥಾಪಕರ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಶೈಕ್ಷಣಿಕ ಸಂಸ್ಥೆಗಳಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು, ಹಬ್ಬಗಳು ಹಾಗೂ ಸಮಾರಂಭಗಳನ್ನು ಮುಂಜಾಗ್ರತವಾಗಿ 2022ರ ಜನವರಿ 15 ರವರೆಗೆ ಮುಂದೂಡುವಂತೆ ಸೂಚನೆ ನೀಡಲಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ 18 ವರ್ಷದೊಳಗಿನ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆಯಬೇಕು ಎಂದು ತಿಳಿಸಿದ್ದಾರೆ.

ಪರೀಕ್ಷೆ-ಪತ್ತೆ-ಚಿಕಿತ್ಸೆ-ಲಸಿಕಾಕರಣ ಮತ್ತು ಕೋವಿಡ್-19 ಸಮುಚಿತ ವರ್ತನೆಗಳನ್ನು ಕಟ್ಟುನಿಟ್ಟಾಗಿ ಎಲ್ಲರು ಅನುರಿಸಬೇಕು. ಸೋಂಕು ಹರಡುವುದನ್ನು ತಡೆಗಟ್ಟಲು ಹೆಚ್ಚಿನ ಪ್ರಕರಣಗಳು ಕಂಡು ಬರುವ ವಲಯ, ಪ್ರದೇಶಗಳಲ್ಲಿ ಕಠಿಣವಾದ ಸೂಕ್ಷ್ಮ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯಿಂದ ಹೊರಡಿಸಲಾದ ಮಾರ್ಗಸೂಚಿಗಳು ಎಲ್ಲರು ಪಾಲಿಸಬೇಕು ಎಂದರು.

ಆರೋಗ್ಯ ಕಾರ್ಯಕರ್ತರು, 65 ವರ್ಷ ಮೀರಿದ ಹಿರಿಯ ನಾಗರಿಕರು ಹಾಗೂ ಸಹವರ್ತಿ ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸರ್ಕಾರದಿಂದ ಕಡ್ಡಾಯವಾಗಿ ಕೋವಿಡ್-19 ತಪಾಸಣೆ ನಡೆಸಲಾಗುತ್ತದೆ.

2 ಡೋಸ್ ಲಸಿಕೆ ಪಡೆದರೆ ಮಾತ್ರ ಮಾಲ್ ಗೆ ಪ್ರವೇಶ ;

ಸರ್ಕಾರಿ ನೌಕರರು ಎರಡು ಡೋಸ್ ಕೋವಿಡ್ ಲಸಿಕೆ ಪಡೆದುಕೊಳ್ಳಬೇಕು. ಇನ್ನೂ ಎರಡು ಡೋಸ್ ಕೋವಿಡ್-19 ಲಸಿಕೆ ಪಡೆದಿರುವ ವ್ಯಕ್ತಿಗಳಿಗೆ ಮಾತ್ರ ಮಾಲ್‍ಗಳು, ಸಿನಿಮಾ ಹಾಲ್ ಹಾಗೂ ಚಿತ್ರ ಮಂದಿರಗಳಲ್ಲಿ ಪ್ರವೇಶಕ್ಕೆ ಅವಕಾಶ.

ಮಾಸ್ಕ್ ಧರಿಸದಿದ್ದರೆ ದಂಡ;

ಮುಖಗವಸು ಧರಿಸುವಿಕೆಯು ಅತ್ಯಾವಶ್ಯಕವಾದ ಸೋಂಕು ನಿಯಂತ್ರಣದ ಕ್ರಮವಾಗಿದೆ. ಯಾವುದೇ ವ್ಯಕ್ತಿಯು ಮುಖಗವಸು ಧರಿಸದಿದ್ದಲ್ಲಿ ನಗರ ಪಾಲಿಕೆ ಪ್ರದೇಶಗಳಲ್ಲಿ 250 ರೂ. ಹಾಗೂ ಇನ್ನಿತರ ಪ್ರದೇಶಗಳಲ್ಲಿ 100 ರೂ.ಗಳ ದಂಡ ವಿಧಿಸಲಾಗುವುದು.

ಮಹಾರಾಷ್ಟ್ರ ರಾಜ್ಯಗಳಿಗೆ ಹೊಂದಿಕೊಂಡಿರುವ ಕಲಬುರಗಿ ಜಿಲ್ಲೆಗಳ ಚೆಕ್ ಪೋಸ್ಟ್ ಗಳಲ್ಲಿ ಹೆಚ್ಚಿನ ಕಣ್ಗಾವಲು ಇರಿಸುವುದನ್ನು ಮುಂದುವರೆಸಲಾಗಿದೆ ಎಂದು ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.