ಕೋವಿಡ್ ರೂಪಾಂತರ ತಳಿ ಹಿನ್ನೆಲೆ: ಪರೀಕ್ಷೆ ಹೆಚ್ಚು ಮಾಡಲು ರಾಜ್ಯಗಳಿಗೆ ಸೂಚನೆ

ನವದೆಹಲಿ,ಆ.22- ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ರೂಪಾಂತರ ಕಾಣಿಸಿಕೊಳ್ಳುತ್ತಿರುವ ನಡುವೆ ಸೋಂಕು ಪತ್ತೆ ಪರೀಕ್ಷೆ ಹೆಚ್ಚು ಮಾಡುವಂತೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಸೂಚನೆ ನೀಡಿದೆ.

ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯಗಳಿಗೆ ಈ ನಿರ್ದೇಶನ ನೀಡಲಾಗಿದ್ದು, ಕೋವಿಡ್ ಸೋಂಕಿನ ಮೇಲೆ ಕಾಲ ಕಾಲಕ್ಕೆ ನಿಗಾ ಇಡುವಂತೆ ಸೂಚಿಸಲಾಗಿದೆ.

ಅನಾರೋಗ್ಯ ಮತ್ತು ತೀವ್ರತರವಾದ ಉಸಿರಾಟ ಮತ್ತು ತೀವ್ರವಾದ ಉಸಿರಾಟದ ಸೋಂಕು ಪ್ರಕರಣಗಳು ಕಂಡು ಬಂದರೆ ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಕರೋನಾ ಸೋಂಕಿನ ಹೊಸ ರೂಪಾಂತರಗಳ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮತ್ತು ಜೀನೋಮ್ ಅನುಕ್ರಮ ಹೆಚ್ಚಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

ಚರ್ಚೆಯ ಬಳಿಕ ಮಾತನಾಡಿದ ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸ್ಥಿರವಾಗಿ ಉಳಿದಿದೆ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಸಜ್ಜಾಗಿದ್ದರೂ, ಇನ್ಫ್ಲುಯೆನ್ಸ ತರಹದ ಅನಾರೋಗ್ಯಕ್ಕೆ ಕಾರಣವಾಗುವ ಸಂಗತಿಗಳ ಮೇಲೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಂಪೂರ್ಣ ಜೀನೋಮ್ ಅನುಕ್ರಮ ಹೆಚ್ಚಿಸಬೇಕಾಗಿದೆ. ಹೊಸ ಜಾಗತಿಕ ರೂಪಾಂತರಗಳ ಮೇಲೆ ನಿಕಟವಾಗಿ ಕಣ್ಣಿಡಬೇಕಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಸುಧಾಂಶ್ ಪಂತ್ ಹೇಳಿದ್ದಾರೆ.

ಕಳೆದ ಏಳು ದಿನಗಳಲ್ಲಿ ಜಾಗತಿಕವಾಗಿ ಒಟ್ಟು 2,96,219 ಹೊಸ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಜಾಗತಿಕ ಜನಸಂಖ್ಯೆಯ ಸುಮಾರು 17 ಪ್ರತಿಶತದಷ್ಟು ಅಂದರೆ ಭಾರತದಲ್ಲಿ ಕೇವಲ 223 ಪ್ರಕರಣಗಳನ್ನು ವರದಿಯಾಗಿವೆ.

ಉನ್ನತ ಮಟ್ಟದ ಸಭೆಯಲ್ಲಿ,ನೀತಿ ಆಯೋಗ್‍ನ ಸದಸ್ಯ ಡಾ ವಿನೋದ್ ಪಾಲ್ , ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.