ಕೋವಿಡ್ ರೂಪಾಂತರಿಯ ಭಯಬೇಡ: ಸಾರ್ವಜನಿಕರಿಗೆ ಸೂಚನೆ

ಚಿಂಚೋಳಿ,ಡಿ 27:ನೆಗಡಿ,ಕೆಮ್ಮು,ಜ್ವರ,ಉಸಿರಾಟದ ಸೋಂಕಿನ ತೊಂದರೆ ಲಕ್ಷಣ ಯಾವುದೇ ಇತರೆ ರೋಗರುಜಿನಗಳು ಕಂಡುಬರುತ್ತಿದ್ದರೆ ಸಾರ್ವಜನಿಕರು ಭಯಪಡದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಉತ್ತಮ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಟಿಎಚ್‍ಒ ಡಾ.ಮಹ್ಮದ್ ಗಫಾರ ಹೇಳಿದರು.
ಚಿಂಚೋಳಿ ಪಟ್ಟಣದ ಚಂದಾಪುರದ ತಹಸೀಲ್ ಸಭಾಂಗಣದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ಕೇರಳದಿಂದ ಕೋವಿಡ್ ರೂಪಾಂತರ ತಳಿ ಜೆಎನ್.1ರಾಜ್ಯಕ್ಕೆ ಆಗಮಿಸಿದ್ದು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ರಾಜ್ಯ ಆರೋಗ್ಯ ಇಲಾಖೆ ಹಾಗೂ ಡಿಎಚ್ ಒ ಆದೇಶ ಹೊರಡಿಸಿದ ಕಾರಣ ಪಟ್ಟಣದ ಸರ್ಕಾರಿ ಆಸ್ವತ್ರೆಯಲ್ಲಿ ಬೇಕಾಗಿರುವ ಆಮ್ಲಜನಕ ಐಸಿಯು ಬೆಡ್ ಕೋವಿಡ್ ಪರೀಕ್ಷೆ ಮತ್ತು ಔಷಧಿಗಳು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿ,ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ನೌಕರರು ಸಿಬ್ಬಂದಿಗಳು ಕೋವಿಡ್-19 ಮಾರ್ಗಸೂಚಿಗಳು ಪಾಲನೆ ಮಾಡಬೇಕು ಯಾವುದೇ ಸಣ್ಣಪುಟ್ಟ ಲಕ್ಷಣಗಳು ಕಂಡು ಬರುತ್ತಿದ್ದರೆ ತಕ್ಷಣ ವೈದ್ಯರನ್ನು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್,ಗ್ರೇಡ್2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ಸಿಪಿಐ ಅಂಬಾರಾಯ ಕಮಾನಮನಿ,ಪಶು ವೈದ್ಯಕೀಯ ಅಧಿಕಾರಿ ಬೋಮ್ಮ,ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಯಂಗನೂರ,ಸಮಾಜ ಕಲ್ಯಾಣ ಪ್ರಭುಲಿಂಗ ಬುಳ್ಳಾ,ಡಾ.ಸೈಯದ್ ಲತೀಫ್,ನೀಲಕಂಠ ಜಾಧವ,ಮಹೇಶ್ವರ,ಕಿರಣಕುಮಾರ,ನರೇಶ,ಸುಪ್ರೀಯಾ,ಅನೇಕರಿದ್ದರು.