ಕೋವಿಡ್ ಮೂಲ ಬಹಿರಂಗಕ್ಕೆ ಅನುಮೋದನೆ

ವಾಷಿಂಗ್ಟನ್, ಮಾ.೧೧- ಜಗತ್ತನ್ನೇ ನಲುಗಿಸಿದ ಕೋವಿಡ್ ಮಹಾಮಾರಿಯ ಮೂಲದ ಬಗ್ಗೆ ಇದೀಗ ಮತ್ತೆ ಚರ್ಚೆ ಆರಂಭವಾಗಿದೆ. ಕೋವಿಡ್ ಮೂಲದ ಬಗೆಗಿನ ಅಮೆರಿಕಾ ಗುಪ್ತಚರ ಮಾಹಿತಿಯನ್ನು ಬಹಿರಂಗಪಡಿಸುವಂತೆ ನಿನ್ನೆ ಅಮೆರಿಕಾ ಸದನದಲ್ಲಿ ೪೧೯-೦ರ ಅಂತರದ ಭರ್ಜರಿ ಸರ್ವಾನುಮತದಿಂದ ಮತ ಹಾಕಲಾಗಿದೆ.
ಇದು ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಲ್ಯಾಬ್‌ಗೆ ಸಂಬಂಧಿಸಿದಂತೆ ಅಮೆರಿಕಾದ ಗುಪ್ತಚರ ವರದಿಯಾಗಿದ್ದು, ಇದನ್ನು ವರ್ಗೀಕರಿಸುವಂತೆ ಇದೀಗ ಯುಎಸ್ ಸದನದಲ್ಲಿ ಸರ್ವಾನುಮತದಿಂದ ಅನುಮೋದಿಸಲಾಗಿದೆ. ಸದ್ಯ ಅಮೆರಿಕಾ ಕಾಂಗ್ರೆಸ್‌ನಲ್ಲಿ ಮಸೂದೆಯ ಅಂತಿಮ ಅನುಮೋದನೆಗಾಗಿ ಅಧ್ಯಕ್ಷ ಜೋ ಬೈಡೆನ್ ಅವರ ಬಳಿ ಕಳುಹಿಸಲಾಗಿದೆ. ಸದ್ಯದ ಮಸೂದೆಯನ್ನು ಜೋ ಬೈಡೆನ್ ಅವರು ಕಾನೂನಾಗಿ ಪರಿವರ್ತಿಸುತ್ತಾರೆ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಹೊರಬಂದಿಲ್ಲ. ಅಲ್ಲದೆ ಈ ವಿಚಾರವು ಅಸ್ಪಷ್ಟವಾಗಿದೆ ಎಂದು ಶ್ವೇತಭವನ ತಿಳಿಸಿದೆ. ಇನ್ನು ಮಸೂದೆಗೆ ಸಹಿ ಹಾಕುವ ಕುರಿತು ಬೈಡೆನ್ ಬಳಿ ಕೇಳಿದಾಗ, ನಾನಿನ್ನೂ ಇದಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಮೆರಿಕಾದ ನಾಗರಿಕರು ಕೋವಿಡ್-೧೯ ಸಾಂಕ್ರಾಮಿಕದ ಪ್ರತಿಯೊಂದು ಅಂಶಕ್ಕೂ ಉತ್ತರವನ್ನು ಪಡೆಯಲು ಅರ್ಹರಾಗಿದ್ದಾರೆ. ಈ ವೈರಸ್ ಅನ್ನು ಹೇಗೆ ಸೃಷ್ಟಿಸಲಾಗಿದೆ? ನಿರ್ದಿಷ್ಟವಾಗಿ ಇದು ನೈಸರ್ಗಿಕ ಘಟನೆಯೇ ಅಥವಾ ಲ್ಯಾಬ್-ಸಂಬಂಧಿತ ಘಟನೆಯ ಫಲಿತಾಂಶವಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಬೇಕಿದೆ ಎಂದು ಸದನದ ಗುಪ್ತಚರ ಸಮಿತಿಯ ಅಧ್ಯಕ್ಷರಾದ ಮೈಕೆಲ್ ಟರ್ನರ್ ತಿಳಿಸಿದ್ದಾರೆ.