ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆ: ಶೈಕ್ಷಣಿಕ ಸಮಾರಂಭ ಮುಂದೂಡಲು ಸರ್ಕಾರ ಸೂಚನೆ

ಬೆಂಗಳೂರು, ನ.28- ಧಾರವಾಡ ,ಮೈಸೂರು ಮತ್ತು ಬೆಂಗಳೂರಿನ ಕೆಲವು ಕಾಲೇಜುಗಳು ಕೋವಿಡ್ ಸೋಂಕಿನ ಕ್ಲಸ್ಟರ್ ಗಳಾಗಿ ಪರಿವರ್ತನೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರನೇ ಅಲೆಯ ಭೀತಿ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದಾಗಿರುವ ರಾಜ್ಯ ಸರ್ಕಾರ, ಶೈಕ್ಷಣಿಕ ಸಂಸ್ಥೆಗಳ ಸಾಮಾಜಿಕ-ಸಾಂಸ್ಕೃತಿಕ,ಶೈಕ್ಷಣಿಕ ಸಭೆ-ಸಮಾರಂಭಗಳನ್ನು ಕನಿಷ್ಠ ಎರಡು ತಿಂಗಳ ಕಾಲ ಮುಂದೂಡುವಂತೆ ರಾಜ್ಯಸರ್ಕಾರದ ಶಿಕ್ಷಣ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ಸಂಬಂಧ ಹೊಸದಾಗಿ ಮಾರ್ಗಸೂಚಿ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ, ವೈದ್ಯಕೀಯ ಅರೆ ವೈದ್ಯಕೀಯ ಸೇರಿದಂತೆ ಇನ್ನಿತರ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರತಿ ದಿನವೂ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಲು ಸೂಚನೆ ನೀಡಿದೆ.

ಶೈಕ್ಷಣಿಕ ಸಂಸ್ಥೆಗಳ ಉಪನ್ಯಾಸ ಸಭೆ-ಸಮಾರಂಭ, ವಿಚಾರ ಸಂಕಿರಣ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕನಿಷ್ಠ ಎರಡು ತಿಂಗಳ ಕಾಲ ಮುಂದೂಡಿ ಅವುಗಳನ್ನು ಅಗತ್ಯವಿದ್ದರೆ ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಸೂಚನೆ ನೀಡಲಾಗಿದೆ.

ಅನಿವಾರ್ಯ ಸಂದರ್ಭದಲ್ಲಿ ಅತಿ ಕಡಿಮೆ ಭೌತಿಕ ಹಾಜರಾತಿಯೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಡೆಸುವಂತೆಯೂ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯಲ್ಲಿ ತಿಳಿಸಿದೆ.

ರಾಜ್ಯದ ಎಲ್ಲಾ ಶೈಕ್ಷಣಿಕ-ಸಂಸ್ಥೆಗಳು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಕಾಲೇಜು ಕ್ಯಾಂಪಸ್ ಗಳ ಆವರಣದಲ್ಲಿ ಸತ್ವ ಮತ್ತು ಇನ್ನಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.

ಲಸಿಕೆಗೆ ಒತ್ತು ನೀಡಲು ಆಗ್ರಹ

ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳು 18 ವರ್ಷ ದಾಟಿದ ತನ್ನ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿರುವುದು ರಾಜ್ಯ ಸರ್ಕಾರವನ್ನು ವಿದ್ಯಾರ್ಥಿ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ