ಕೋವಿಡ್ ಮೂರನೇ ಅಲೆ ತಡೆಗೆ ಸಿದ್ಧ: ಪ್ರಭು ಚವ್ಹಾಣ್

(ಸಂಜೆವಾಣಿ ವಾರ್ತೆ)
ಬೀದರ:ಜೂ.3: ಕೊವಿಡ್-19 ಎರಡನೇ ಅಲೆಯು ಈಗಾಗಲೇ ಮುಕ್ತಾಯದ ಹಂತಕ್ಕೆ ಬಂದಿದೆ. ಅಂತೆಯೇ ಸಂಭವನೀಯ ಮೂರನೇ ಅಲೆ ತಡೆಗೂ ಕೂಡ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತಾವು ಜಿಲ್ಲಾಡಳಿತಕ್ಕೆ ತಿಳಿಸಿದ್ದಾಗಿ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜೂನ್ 2ರಂದು ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಮಕ್ಕಳಿಗು ಕೂಡ ಕೋವಿಡ್ ಹರಡುವ ಸಾಧ್ಯತೆ ಇದೆ ಎಂಬುದು ಪತ್ರಿಕೆಗಳಲ್ಲಿ ವರದಿಯಾಗಿರುವುದು ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ತಾವು ಆರೋಗ್ಯ ಇಲಾಖೆಯ ಸಚಿವರೊಂದಿಗೆ ಮಾತನಾಡಿದ್ದು, ಪ್ರತಿ ತಾಲೂಕಿನಲ್ಲಿ ಮಕ್ಕಳ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸುವುದರ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಬ್ರಿಮ್ಸ್ ನಿರ್ದೇಶಕರೊಂದಿಗೆ ಮಾತನಾಡಿ, ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ವಾರ್ಡಗಳನ್ನು ಮೀಸಲಿರಿಸುವುದು ಮತ್ತು ಅಗತ್ಯ ಪ್ರಮಾಣದಲ್ಲಿ ಮಕ್ಕಳರೋಗ ತಜ್ಞ ವೈದ್ಯರು ಇರುವಂತೆ ಈಗಿನಿಂದಲೇ ನೋಡಿಕೊಂಡು ಅಗತ್ಯ ಸಿದ್ಧತೆ ಮಾಡಿಕೊಳ್ಳುವುದರ ಬಗ್ಗೆ ತಿಳಿಸಿದ್ದಾಗಿ ಹೇಳಿದರು.
ಜೂನ್ 2ರಂದು 22 ಜನರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಕೋವಿಡ್ ಡೇತ್ ವರದಿಯಾಗಿಲ್ಲ. 37 ಜನರು ಕೋವಿಡ್‍ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
3000 ಜನರಿಗೆ ಕೋವಿಡ್ ತಪಾಸಣೆ ನಡೆಸಲಾಗಿದೆ. ಹೊಸದಾಗಿ ಮೂರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಟ್ಟು ಪಾಜೀಟಿವ್ ಕೇಸಸ್ 23,882., ಸಕ್ರೀಯ ಪ್ರಕರಣಗಳು 303, ಹೋಮ್ ಐಸೋಲೇಶನ್ 204 ಎಂದು ಸಚಿವರು ಮಾಹಿತಿ ನೀಡಿದರು. ರೆಮ್‍ಡಿಸಿವರ್, ಬೆಡ್ ಯಾವುದೇ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.
ಇಂದಿನಿಂದ ಬೀಜ ವಿತರಣೆ: ಜೂನ್ 3ರಿಂದ ಎಲ್ಲ ತಾಲೂಕುಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಅಗತ್ಯ ವ್ಯವಸ್ಥೆ ಮಾಡುವಂತೆ ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೀಜ ವಿತರಣೆ ವೇಳೆಯಲ್ಲಿ ರೈತರು ಗುಂಪಾಗಿ ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಬೀಜ ವಿತರಣೆಗೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಸೋಯಾಬೀನ್ ಬೀಜ 75,414 ಕ್ವಿಂಟಲ್ ನಷ್ಟು, ತೊಗರಿ 272 ಕ್ವಿಂಟಲ್, ಉದ್ದು 56 ಕ್ವಿಂಟಲ್, ಹೆಸರು 78 ಕ್ವಿಂಟಲ್, ಜೋಳ 38ಕ್ವಿಂಟಲ್‍ನಷ್ಟು ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅಭಿನಂದನೆಗಳು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಬೀದರನ ಬ್ರಿಮ್ಸಗೆ ಆಕ್ಸಿಜನ್ ಲಭ್ಯೆತೆಗೆ ಸಹಕಾರ ನೀಡಿದ್ದು ಅವರಿಗೆ ಅಭಿನಂದನೆಗಳು ಎಂದು ಇದೆ ವೇಳೆ ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಇದ್ದರು.

¸